

ಶೃಂಗೇರಿ: ಮಳೆ ದೇವರೆಂದೇ ಹೆಸರಾಗಿರುವ ಕಿಗ್ಗಾ ಶ್ರೀ ಶಾಂತಾಸಮೇತ ಋಷ್ಯಶೃಂಗ ಸ್ವಾಮಿ ಸನ್ನಿಧಿಯಲ್ಲಿ ಬುಧವಾರ ಮಹಾರುದ್ರ ಹೋಮ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರತಿ ವರ್ಷದಂತೆ ಲೋಕ ಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ರುದ್ರಹೋಮದ ಅಂಗವಾಗಿ ನವಗ್ರಹ ಶಾಂತಿ, ಚಂಡಿಕಾ ಯಾಗ, ಲಲಿತಾ ಲಕ್ಷಾರ್ಚನೆ, ಲಲಿತಾಹೋಮ, ಶಿವಪಂಚಾಕ್ಷರಿ ಹೋಮ ನಡೆಯಿತು. ಅರ್ಚಕ ಶಿವರಾಂ ಭಟ್ ಮತ್ತು ವಿಶ್ವನಾಥ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ 20 ಋತ್ವಿಜರ ಉಪಸ್ಥಿತಿಯಲ್ಲಿ ನಡೆಯಿತು. ತಾಲೂಕಿನ ಕಸಬಾ ಮತ್ತು ಕಿಗ್ಗಾ ಹೋಬಳಿಯ ಸುಮಾರು 2,000ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದ್ದರು.
ರುದ್ರಹೋಮದ ಪೂರ್ವಭಾವಿಯಾಗಿ ಮಂಗಳವಾರ ಶಾಲಾ ಪ್ರವೇಶ, ಗುರುಗಣೇಶ ಪೂಜಾ, ಪುಣ್ಯವಾಚನ, ಋತ್ವಿಕ್‌ಗ್ವರಣ, ದ್ವಾದಶ ನಾರಿಕೇಳ ಗಣಹೋಮ, ಸಪ್ತಶತಿ ಪಾರಾಯಣ, ಲಲಿತಾ ಲಕ್ಷಾರ್ಚನೆ ಮತ್ತು ಮಹಾರುದ್ರಹೋಮದ ಪುರಶ್ಚರಣೆ ನಡೆಯಿತು. ಸಮಿತಿ ಅಧ್ಯಕ್ಷ ವಿನಾಯಕ ಶಾಸೀ, ಮುಖಂಡರಾದ ಕೆ.ಎನ್.ಗೋಪಾಲ ಹೆಗ್ಡೆ, ಎ.ಎಸ್.ನಯನ, ಟಿ.ಕೆ.ಪರಾಶರ, ಚಂದ್ರಶೇಖರ ರಾವ್, ಸೂರ‌್ಗೋಡ್ ಕೃಷ್ಣಮೂರ್ತಿ, ಅರುಣಾಚಲಾ ಇತರರಿದ್ದರು.