ಕಾಶ್ಮೀರದಲ್ಲಿ ನಡೆದ ದಾಳಿಗೆ ಖಂಡನೆ-ಹುತಾತ್ಮರಿಗೆ ಶ್ರದ್ದಾಂಜಲಿ / ಪಾಪಿ ಉಗ್ರರಿಗೆ ತಕ್ಕ ಶಿಕ್ಷೆ ಖಚಿತ / ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಖಂಡನೀಯವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ನೀಡಲಿದ್ದು, ಈ ಘಟನೆಯನ್ನು ಇಡೀ ದೇಶದ ಜನತೆ ಪಕ್ಷಭೇದ ಮರೆತು ಖಂಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಡೂಂಲೈಟ್ ವೃತ್ತದಲ್ಲಿ ಬುಧವಾರ ರಾತ್ರಿ ಜಿಲ್ಲಾ ಬಿಜೆಪಿ ವತಿಯಿಂದ ಕಾಶ್ಮೀರ ಧಾಳಿಯಲ್ಲಿ ಹುತಾತ್ಮರಾದವರಿಗೆ ಮೇಣದ ಬತ್ತಿ ಬೆಳಗಿ ಶ್ರದ್ದಾಂಜಲಿ ಅರ್ಪಿಸಿದ ನಂತರ ಮಾತನಾಡಿದರು.

ಘಟನೆಯಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಧಾಳಿ ನಡೆಸಿರುವ ಪಾಪಿ ಉಗ್ರರಿಗೆ ತಕ್ಕ ಶಾಸ್ತಿ ಮಾಡಬೇಕು. ಇಂತಹ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಈಗಾಗಲೇ ತಕ್ಕರಾಜತಾಂತ್ರಿಕ ಉತ್ತರ ನೀಡಿದ್ದು, ಮುಂದೆಯೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಈ ಘಟನೆಗೆ ಕಾರಣರಾದ ನೀಚ ಉಗ್ರಗಾಮಿಗಳನ್ನು ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭಾರತದ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ತೋರಿಸಬೇಕಾಗಿದೆ. ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಹುತಾತ್ಮರಾದವರ ಕುಟುಂಬಗಳ ಜತೆಗಿದೆ ಎಂದರು.

ಇದು ಹಿಂದೂಗಳನ್ನು ದಮನ ಮಾಡುವ ಕೃತ್ಯವಾಗಿದೆ, ಕೇವಲ ಹಿಂದೂಗಳನ್ನೇ ಗುರಿಯಾಗಿಸಿ ಈ ಕೃತ್ಯ ನಡೆದಿರುವ ಕುರಿತು ವರದಿಯಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರ ನೀಡಿ ಇಂತಹ ದೇಶದ್ರೋಹಿಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ನಮ್ಮ ಸಹೋದರರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಅವಕಾಶ ಇರಲಿಲ್ಲ. ಕೇಂದ್ರದ ಮೋದಿ ಸರ್ಕಾರದ ದಿಟ್ಟ ಕ್ರಮದಿಂದ ೩೭೦ನೇ ವಿಧಿಯನ್ನು ತೆಗೆದು ಹಾಕಿ ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತ್ತು ಎಂದು ತಿಳಿಸಿದರು.

ಮುಖಂಡ ಅಪ್ಪಿ ನಾರಾಯಣಸ್ವಾಮಿ, ಸಾಮಾ ಬಾಬು, ಎಬಿವಿಪಿ ಹರೀಶ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ನಗರ ಒಬಿಸಿ ಮೋರ್ಚಾ ಶ್ರೀನಾಥ್, ಶಂಕರ್, ಮಹೇಶ್ ಮತ್ತಿತರರಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೪ : ಕೋಲಾರದ ಡೂಂಲೈಟ್ ವೃತ್ತದಲ್ಲಿ ಬುಧವಾರ ರಾತ್ರಿ ಜಿಲ್ಲಾ ಬಿಜೆಪಿ ವತಿಯಿಂದ ಕಾಶ್ಮೀರ ಧಾಳಿಯಲ್ಲಿ ಹುತಾತ್ಮರಾದವರಿಗೆ ಮೇಣದ ಬತ್ತಿ ಬೆಳಗಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net