

ಶೃಂಗೇರಿ: ಕನ್ನಡಿಗರು ಕನ್ನಡ ನಾಡು, ನುಡಿಗಾಗಿ ತಾಯಿ ಭುವನೇಶ್ವರಿಯ ಸೇವೆ ಸಲ್ಲಿಸಲು ಕಟಿಬದ್ಧರಾಗಿರಬೇಕು ಎಂದು ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ತಿಳಿಸಿದರು.
ಭಾನುವಾರ ಕನ್ನಡಭವನದಲ್ಲಿ ಕಾಸರಗೋಡಿನ ಪೆರ್ಲ ಸವಿಹೃದಯದ ಕವಿಮಿತ್ರರು ವೇದಿಕೆ ಹಾಗೂ ತಾಲೂಕು ಕಸಾಪ ಸಹಯೋಗದಲ್ಲಿ ಆಯೋಜಿಸಿದ್ದ ಶೃಂಗೇರಿ ಸಾಹಿತ್ಯ ದರ್ಶನ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಬೆಳೆಯಬೇಕು ಎಂದರೆ ನಮ್ಮಲ್ಲಿ ಸಹೃದಯ ಇರಬೇಕು. ಎಲ್ಲರೂ ಒಗ್ಗಟ್ಟಿನಿಂದ ಕನ್ನಡಭಾಷೆ ಬೆಳೆಸಬೇಕಿದೆ. ಕಾವ್ಯ ಎಂದರೆ ಅನುಭವದ ಅನುಭೂತಿಯ ಸಾರ. ಭಾವನೆಗಳ ಸಮ್ಮಿಲನಗಳ ಜತೆ ಜೀವನದ ಅನುಭಾವದ ಸಾರ ಮಿಳಿತಗೊಂಡಾಗ ಕವಿತೆ ಸ್ಪುರಿಸುತ್ತದೆ. ಕವಿಯ ಹಾಗೂ ಓದುಗರ ಅನುಭವ ಎರಡೂ ಸಮಾನವಾಗಿ ಪರಿಮೂಡಿದಾಗ ಮಾತ್ರ ಕವಿತೆ ಹೃದಯವನ್ನು ತಟ್ಟುತ್ತದೆ. ಕಾವ್ಯದ ಹೂರಣವನ್ನು ಕಟ್ಟಿದಾಗ ಅದು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತದೆ. ಅಧ್ಯಯನದ ಅನುಭವದ ಜತೆ ತನ್ನೊಳಗಿನ ಸೃಜನಶೀಲತೆಯನ್ನು ಆನಾವರಣಗೊಳಿಸಿ ಕವಿಗಳು ಕಾವ್ಯ ಕಟ್ಟಬೇಕು ಎಂದು ಹೇಳಿದರು.
ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಮಾತನಾಡಿ, ನಾಡು, ನುಡಿಯ ಸೇವೆಗಾಗಿ ನಮ್ಮ ಸಂಸ್ಥೆ ನಿರಂತರ ಶ್ರಮಿಸುತ್ತಿದೆ. ಕನ್ನಡಿಗರಲ್ಲಿ ಸಾಹಿತ್ಯದ ಪ್ರಜ್ಞೆ ಉಳಿದು ಬೆಳೆಯಬೇಕು ಎಂಬ ಉದ್ದೇಶದಿಂದ ವೈವಿಧ್ಯಮಯ ಸಾಹಿತ್ಯ ಮತ್ತು ವಿಚಾರಗೋಷ್ಠಿಗಳು, ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದು ಮುಂದಿನ ಪೀಳಿಗೆಗೆ ಸಾಹಿತ್ಯದ ಕಂಪು ಪಸರಿಸುವ ಪ್ರಯತ್ನ ನಮ್ಮದಾಗಿದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಎರಡು ಜೆಲ್ಲೆಗಳ ಸಮಾಗಮ ಸಾಹಿತ್ಯ ಮೌಲ್ಯಗಳಿಗೆ ಅದ್ಭುತ ಶಕ್ತಿ ನೀಡುವಲ್ಲಿ ಯಶಸ್ಸು ಕಂಡಿದೆ. ಸಾಹಿತ್ಯದ ನಿರಂತರ ಹರಿವು ಸಮಾಜದ ಉನ್ನತೀಕರಣವನ್ನು ಸಾಕ್ಷಾತ್ಕರಿಸುತ್ತದೆ. ಕನ್ನಡಿಗರು ಕನ್ನಡಭಾಷೆಯ ಗಟ್ಟಿತನಕ್ಕಾಗಿ ಸದಾ ಕ್ರಿಯಾಶೀಲರಾಗಿ ದುಡಿಯಬೇಕು ಎಂದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ 11 ಕವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಮಾರಂಭದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಸಂಘಟನಾ ಕಾರ್ಯದರ್ಶಿ ಆನಂದಸ್ವಾಮಿ, ಗಾಯಕ ಜಯಪ್ರಕಾಶ್ ಮಣಿಯಂಪಾರೆ, ತಾಲೂಕು ಕಸಾಪ ಪೂರ್ವಾಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ ಇದ್ದರು.