ಕಾವ್ಯ ಅಧ್ಯಯನದಿಂದ ಹೊಸ ಭರವಸೆ

18
Published on

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೈದಿಗಳಿಗೆ ಸಾಹಿತ್ಯ ಕಮ್ಮಟ ಏರ್ಪಡಿಸಿರುವುದು ಅಪೂರ್ವ ಮತ್ತು ಅಪರೂಪದ ಕಾರ್ಯ ಎಂದು ಹಿರಿಯ ಲೇಖಕ ಮೊರಬದ ಮಲ್ಲಿಕಾರ್ಜುನ ಶ್ಲಾಘಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾರಾಗೃಹ ಇಲಾಖೆ ಹಾಗೂ ನಗರದ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಆಯೋಜಿಸಿರುವ ಸಾಹಿತ್ಯ ಕಮ್ಮಟದ 2ನೇ ದಿನವಾದ ಗುರುವಾರ ಅವರು ‘ಕಾವ್ಯ ಜಗತ್ತು’ ಕುರಿತು ಮಾತನಾಡಿದರು.

ಕನ್ನಡ ಕಾವ್ಯ ಜಗತ್ತು ಆತ್ಮವಿಶ್ವಾಸ, ಭರವಸೆ, ಸಂತೋಷ ಸಂಭ್ರಮ ನೀಡಿದೆ. ಹಾಗೆಯೇ ಎಲ್ಲರೂ ಒಳ್ಳೆಯವರಾಗುವ, ಮುಂದುವರಿಯುವ ಅವಕಾಶವನ್ನು ಕಾವ್ಯ ಕೊಡುತ್ತದೆ. ಅಲ್ಲದೆ ನೆಮ್ಮದಿಯನ್ನು, ಹೊಸ ಭರವಸೆಯನ್ನು ಕಾವ್ಯ ಕೊಡುತ್ತದೆ. ಇದನ್ನು ಕೈದಿಗಳೂ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪ್ರೊ.ಚಂದ್ರಕಿರಣ್ ಕುಳವಾಡಿ ಮಾತನಾಡಿ, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿಯು ನಮ್ಮ ಬದುಕನ್ನು ಬದಲಾಯಿಸುವ ಸಾಧನಗಳು ಎಂದರು.

ಕಥಾಜಗತ್ತು ಕುರಿತು ಕಥೆಗಾರ್ತಿ ದೀಪ್ತಿ ಭದ್ರಾವತಿ ಮಾತನಾಡಿ, ಶಿಕ್ಷಣ ವಂಚಿತರಾದ ಮಹಿಳೆಯರು ಬಂದ ಬದುಕನ್ನು ಒಪ್ಪಿಕೊಂಡು, ಅಪ್ಪಿಕೊಂಡವರು ಅಸಂಖ್ಯಾತರಿದ್ದಾರೆ. ಹೀಗಿದ್ದಾಗ ನಮ್ಮ ಸಂಕಟ, ನೋವು, ತಲ್ಲಣಗಳನ್ನು ನಾವೇ ಬರೆದರೆ ಹೆಚ್ಚು ಸಶಕ್ತ. ಹಾಗೆ ಬರೆದಾಗ ವಿರೋಧ ವ್ಯಕ್ತವಾಗಿದ್ದೂ ಇದೆ ಎಂದು ತಿಳಿಸಿದರು.

‘ಕಾದಂಬರಿ ಜಗತ್ತು’ ಕುರಿತು ಪ್ರೊ.ಎಚ್.ಟಿ.ವೆಂಕಟೇಶ ಮೂರ್ತಿ ಮಾತನಾಡಿದರು. ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್, ಜೈಲರ್ ಎಂ.ಡಿ.ಧರಣೇಶ್, ಲೇಖಕ ಗಣೇಶ ಅಮೀನಗಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net