ಕೆ.ಆರ್.ಎಸ್: ಕೈ-ಕಾಲು ತೊಳೆಯಲು ಹೋಗಿದ್ದ ಬಾಲಕನೊಬ್ಬ ಬಲಮುರಿಯ ದೇವಸ್ಥಾನದ ಬಳಿಕ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕೇರಳ ಮೂಲದ ಹಾಲಿ ಚನ್ನಪಟ್ಟಣದಲ್ಲಿ ವಾಸವಿರುವ ವ್ಯಾಪಾರಿ ರಾಜೀವನ್ ಅವರ ಪುತ್ರ ಶ್ರೀಹರಿ (14) ಮೃತ ಬಾಲಕ. ರಾಜೀವನ್ ಪತ್ನಿ, ಮಗಳು, ಮಗನೊಂದಿಗೆ ಭಾನುವಾರ ಶ್ರೀರಂಗಪಟ್ಟಣ ಪ್ರವಾಸ ಮುಗಿಸಿ ಬಲಮುರಿಗೆ ಆಗಮಿಸಿದ್ದರು. ದೇವಾಲಯ ಸಮೀಪದ ಮೆಟ್ಟಲುಗಳ ಬಳಿಯ ಕಾವೇರಿ ನದಿಗೆ ಶ್ರೀಹರಿ ಕೈ-ಕಾಲು ತೊಳೆಯುಲು ಹೋದಾಗ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ಸಂಜೆ ನುರಿತ ಈಜುಗಾರರು ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಶೋಧಕಾರ್ಯ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.