ಕಾರ್ಮಿಕರಿಗೆ ವರದಾನ ಸಂಚಾರಿ ಕ್ಲಿನಿಕ್

WhatsApp Image 2025-10-08 at 6.13.05 PM
Published on

ಅವಿನಾಶ್ ಜೈನಹಳ್ಳಿ ಮೈಸೂರು

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ರಕ್ಷಣೆಗೆ ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಮಿಕರ ಪಾಲಿಗೆ ಯೋಜನೆ ವರದಾನವಾಗಿದೆ.

ಮೈಸೂರಿನಲ್ಲಿ ಆರಂಭವಾಗಿರುವ 4 ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್‌ಗೆ ಕಾರ್ಮಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಮಿಕರು ತಮ್ಮ ಆರೋಗ್ಯ ಸಮಸ್ಯೆಗೆ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್‌ಗಳ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡಿರುವ ಜಿಲ್ಲೆಯ 1,48,536 ಕಾರ್ಮಿಕರು ಹಾಗೂ ಅವರ ಕುಟುಂಬದವರು ಸೇರಿ ಒಟ್ಟು 6 ಲಕ್ಷ ಜನರಿಗೆ ಆರೋಗ್ಯ ಸೇವೆ ದೊರೆಯುತ್ತಿದೆ.

ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಿಗೆ 100 ಸಂಚಾರಿ ಆರೋಗ್ಯ ಕ್ಲಿನಿಕ್‌ಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಸದರಿ ಯೋಜನೆಯನ್ನು ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಯೋಜನೆಯಡಿ 4 ಸಂಚಾರಿ ಹೈಟೆಕ್ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಮಿಕರು ಮತ್ತು ಕುಟುಂಬ ಯೋಜನೆಯಡಿ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳ ಮಾಹಿತಿ ಪ್ರಕಾರ ಸುಮಾರು 1000ಕ್ಕೂ ಮೇಲ್ಪಟ್ಟು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ 3500ಕ್ಕೂ ಹೆಚ್ಚು ಫಲಾನುಭವಿಗಳು ಇದರ ಅನುಕೂಲ ಪಡೆದಿದ್ದಾರೆ. ಎಲ್ಲ ವೈದ್ಯಕೀಯ ಉಪಕರಣಗಳು ವಾಹನದೊಳಗೆ ಅಳವಡಿಸಲು ಸಾಧ್ಯವಾಗುವಂತ ವಿಶಾಲವಾದ ವಾಹನ ಇವಾಗಿವೆ.

ಎಲ್ಲಿಗೆ ಎಷ್ಟು ಸೇವೆ?:

ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಗೆ 2, ತಿ.ನರಸೀಪುರ- ನಂಜನಗೂಡು-ಎಚ್.ಡಿ.ಕೋಟೆಗೆ 1, ಕೃಷ್ಣರಾಜನಗರ- ಹುಣಸೂರು-ಪಿರಿಯಾಪಟ್ಟಣ 1 ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನಗಳು ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡುತ್ತಿವೆ. ಕಾರ್ಮಿಕ ಇಲಾಖೆಯಡಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೇವೆ ಪಡೆಯಬಹುದಾಗಿದೆ.

ಕಾರ್ಯಾಚರಣೆ ಹೇಗೆ?

ಪ್ರತಿ ಸಂಚಾರಿ ಕ್ಲಿನಿಕ್‌ಗಳಲ್ಲಿಯೂ ಒಬ್ಬರು ವೈದ್ಯಕೀಯ ಅಧಿಕಾರಿ, ಇಬ್ಬರು ಶುಶ್ರೂಷಕಿಯರು, 1 ಫಾರ್ಮಸಿಸ್ಟ್ ಕಮ್ ಅಡ್ಮಿನಿಸ್ಪ್ರೇಟಿವ್ ಅಸಿಸ್ಟೆಂಟ್, 1 ಪ್ರಯೋಗಾಲಯ ತಜ್ಞರು, ಒಬ್ಬರು ಚಾಲಕರು ಕಾರ್ಯನಿರ್ವಹಿಸುವರು. ಈ ಸುಸಜ್ಜಿತ ತಂಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಕಡೆ, ಮಧ್ಯಾಹ್ನದ ನಂತರ ಮತ್ತೊಂದು ವಾರ್ಡ್, ಗ್ರಾಮಗಳ ಬಸ್ ನಿಲ್ದಾಣದ ಬಳಿ ಕನಿಷ್ಠ 4 ಗಂಟೆ ಕಾರ್ಯನಿರ್ವಹಿಸಲಿವೆ. ಈ ಕ್ಲಿನಿಕ್ ಅನ್ನು ಯಾವಾಗ ಎಲ್ಲೆಲ್ಲಿ ನಡೆಸಲಾಗುತ್ತದೆ ಎಂಬ ಒಂದು ತಿಂಗಳ ರೂಟ್ ಮ್ಯಾಪನ್ನು 15 ದಿನ ಮುಂಚಿತವಾಗಿಯೇ ಸಿದ್ಧಪಡಿಸಿ ಸಂಬಂಧಿಸಿದ ವಾರ್ಡ್, ತಾಪಂ, ಗ್ರಾಪಂ, ಹೋಬಳಿ, ಕಾರ್ಮಿಕ ಸಂಘಟನೆಗಳಿಗೆ ರವಾನಿಸಲಾಗುತ್ತದೆ. ಮಂಡಳಿಯಿಂದ ಪಡೆದಿರುವ ಕಾರ್ಡ್ ತೋರಿಸಿ ಸೇವೆ ಪಡೆಯಬಹುದು. ಏನಿರುತ್ತೆ?

ಸಂಚಾರಿ ಘಟಕದಲ್ಲಿ 25 ಮಾದರಿಯ ಪರೀಕ್ಷೆ ಮಾಡಬಹುದಾದ ವೈದ್ಯಕೀಯ ಉಪಕರಣ, ಬಯೋಕೆಮಿಸ್ಟ್ರಿ ಅನಲೈಸರ್, ಇಎಸ್‌ಆರ್, ಯೂರಿನ್ ಅನಲೈಸರ್, ಎಚ್‌ಬಿ ಮೀಟರ್ ಸೇರಿದಂತೆ ಒಟ್ಟು 5 ಪ್ರಯೋಗಾಲಯ ಉಪಕರಣಗಳು, ಚಿಕಿತ್ಸೆಗೆ ಪೂರಕವಾದ 37 ನಾನಾ ವೈದ್ಯಕೀಯ ಬಳಕೆ ವಸ್ತುಗಳು ವಾಹನದಲ್ಲಿವೆ.

ಕಾರ್ಮಿಕರಿಗೆ ಎಲ್ಲ ರೀತಿಯ ಆಧುನಿಕ ವೈದ್ಯಕೀಯ ಪರೀಕ್ಷೆಗಳನ್ನು ನಿಖರವಾಗಿ ನೀಡುವಂತಹ ವರದಿಗಳನ್ನು ವಾಹನದಲ್ಲಿನ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಕಂಡುಬಂದ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಆಂಬುಲೆನ್ಸ್ ಮಾದರಿಯಲ್ಲೂ ಸೇವೆಯನ್ನು ಒದಗಿಸಿ ತದನಂತರ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

ಯಾವ್ಯಾವ ಚಿಕಿತ್ಸೆ?:

ಈ ಕ್ಲಿನಿಕ್‌ನಲ್ಲಿ ಹೊರ ರೋಗಿಗಳಾಗಿ (ಒಪಿಡಿ) ಪಡೆಯುವ ಎಲ್ಲ ಚಿಕಿತ್ಸೆಗಳ ಸೇವೆ ನೀಡಲಾಗುತ್ತದೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ನಾನಾ ಕಾಯಿಲೆಗಳನ್ನು ಪರೀಕ್ಷಿಸಿ ಔಷಧ ವಿತರಿಸಲಾಗುವುದು. 20ಕ್ಕೂ ಹೆಚ್ಚು ಪರೀಕ್ಷೆಗಳನ್ನು ಸ್ಥಳದಲ್ಲಿಯೇ ಮಾಡಲಾಗುತ್ತದೆ. ಮುಖ್ಯವಾಗಿ ತಾಯಿಯ ಆರೋಗ್ಯ, ಗರ್ಭಾವಸ್ಥೆ, ರಕ್ತಹೀನತೆ, ನವ ಜನನ ಮತ್ತು ಶಿಶು ಆರೋಗ್ಯ, ಮಗು ಮತ್ತು ಹದಿಹರೆಯದವರ ಆರೋಗ್ಯ, ನಿರ್ಜಲೀಕರಣ, ಜ್ವರ, ಸಮಾಲೋಚನೆ, ತೀವ್ರ ಅಪೌಷ್ಟಿಕತೆ, ಮೂರ್ಛೆ, ಕಣ್ಣಿನ ಆರೈಕೆ, ದಂತ ಆರೈಕೆ, ಡಿ-ಅಡಿಕ್ಷನ್, ಮಾನಸಿಕ ಅಸ್ವಸ್ಥತೆಯ ನಿರ್ವಹಣೆ, ಸಾಂಕ್ರಾಮಿಕವಲ್ಲದ ರೋಗಗಳು, ಮೂಲಭೂತ ಒಪಿಡಿ ಆರೈಕೆ, ಕ್ಷಯರೋಗ, ಎಚ್‌ಐವಿ, ಕುಷ್ಠರೋಗ, ಮಲೇರಿಯಾ, ಫೈಲೇರಿಯಾಸಿಸ್, ಅಂಗವೈಕಲ್ಯ ಸೇರಿ ನಾನಾ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಬಹುದಾಗಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ರಕ್ಷಣೆಗೆ ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಲ್ಲಿ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ತಿಂಗಳ ಮಾಹಿತಿ ಪ್ರಕಾರ ಸುಮಾರು 1000ಕ್ಕೂ ಮೇಲ್ಪಟ್ಟು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ 3500 ಕ್ಕೂ ಹೆಚ್ಚು ಫಲಾನುಭವಿಗಳು ಇದರ ಅನುಕೂಲ ಪಡೆದಿದ್ದಾರೆ. ಎಲ್ಲ ವೈದ್ಯಕೀಯ ಉಪಕರಣಗಳು ವಾಹನದೊಳಗೆ ಅಳವಡಿಸಲು ಸಾಧ್ಯವಾಗುವಂತಹ ವಿಶಾಲವಾದ ವಾಹನ ಇವಾಗಿವೆ. ಚೇತನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net