ಕಾರ್ಮಿಕರನ್ನು ಗುಲಾಮರನ್ನಾಗಿಸಿವೆ ಸರ್ಕಾರಗಳು

HUN-AUG-10-1{CITU JATHA}
ಹುಣಸೂರು ನಗರದ ಹಳೇ ಬಸ್‌ನಿಲ್ದಾಣದ ಮುಂಭಾಗ ಆಯೋಜಿಸಿದ್ದ ಪ್ರಚಾರಾಂದೋಲನ ಜಾಥಾದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಯರಾಂ ಮಾತನಾಡಿದರು. ವಿ.ಬಸವರಾಜು, ಶಿವರಾಂ, ರವಿ, ಯೋಗೀಶ್ ಇದ್ದರು.
Published on

ಹುಣಸೂರು: ದೇಶವನ್ನು ಆಳುತ್ತಿರುವ ಸರ್ಕಾರಗಳು ಕಾರ್ಮಿಕರನ್ನು ಕಾನೂನುಬದ್ಧ ಗುಲಾಮರನ್ನಾಗಿಸಿವೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಜಯರಾಮು ಆರೋಪಿಸಿದರು.

77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿಐಟಿಯು ಮತ್ತು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಸಹಯೋಗದಲ್ಲಿ ಗುರುವಾರ ನಗರದ ಹಳೇ ಬಸ್ ನಿಲ್ದಾಣದ ಮುಂಭಾಗ ಆಯೋಜಿಸಿದ್ದ ಒಂದು ವಾರ ಕಾಲದ ಪ್ರಚಾರಾಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು, ಕಲ್ಯಾಣ ಮಂಟಪ ಸ್ವಚ್ಛತೆಗಾರರು, ಪೌರಕಾರ್ಮಿಕರು ಸೇರಿದಂತೆ 39 ಕೋಟಿಗೂ ಹೆಚ್ಚು ಜನರ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಈ ಕಾರ್ಮಿಕರ ಕೆಲಸಕ್ಕೆ ಭದ್ರತೆ, ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುವ ಯಾವುದೇ ಯೋಜನೆ ಜಾರಿಗೊಳಿಸದೆ, ಇರುವ 29 ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ತಂದು ಇಡೀ ಕಾರ್ಮಿಕ ವರ್ಗವನ್ನು ಕೇಂದ್ರ ಸರ್ಕಾರ ಕಾನೂನುಬದ್ಧ ಗುಲಾಮರನ್ನಾಗಿಸಲು ಹೊರಟಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ರೈತರ ಕೃಷಿಯ ಬದಲಿಗೆ ಕಾರ್ಪೊರೇಟ್ ಕೃಷಿಯನ್ನು ತರಲು ಹೊರಟಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸಿಐಟಿಯು ತಾಲೂಕು ಸಂಚಾಲಕ ವಿ.ಬಸವರಾಜ ಕಲ್ಕುಣಿಕೆ ಮಾತನಾಡಿ, ಜಾತಿವಾದ, ಕೋಮುವಾದ, ಮಹಿಳೆಯರ ಮೇಲಿನ ಕೌರ್ಯದಂತಹ ಸಾಮಾಜಿಕ ಅನಿಷ್ಟಗಳಿಂದ ವಿಮುಕ್ತಿ ಮತ್ತು ಪ್ರಜಾಸತ್ತಾತ್ಮಕ ಪರಿಸರದಲ್ಲಿ ಜನಗಳ ಸಾಂಸ್ಕೃತಿಕ ಅಗತ್ಯತೆಗಳನ್ನು ಆಳುವ ಸರ್ಕಾರಗಳು ಪೂರೈಸಬೇಕಾಗಿದೆ ಎಂದರು.

ಪ್ರಚಾರಾಂದೋಲನದಲ್ಲಿ ಸಿಐಟಿಯು ಮುಖಂಡರಾದ ಶಿವರಾಂ, ರವಿ, ಯೋಗೇಶ್, ಸೋಮಶೇಖರ್, ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ರಾಧಾಕೃಷ್ಣ, ನಿಂಗರಾಜು ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net