

ಮೈಸೂರು: ವಿವಿಧ ಯೋಜನೆಗಳಿಂದ ರಾಜ್ಯಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ವಾಪಸ್ ಆಗದಂತೆ ನಿಗದಿತ ದಿನದೊಳಗೆ ಪೂರ್ಣಗೊಳಿಸಬೇಕು. ಅನುದಾನ ಬಳಕೆ ಮಾಡದಿದ್ದಲ್ಲಿ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳು ಖರ್ಚು ಮಾಡಬೇಕು. ಇದುವರೆಗೆ ಆರಂಭಿಸದೆ ಇರುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದರೆ ಅವುಗಳನ್ನು ಮುಗಿಸಬೇಕು ಎಂದು ಹೇಳಿದರು. ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಕೇಂದ್ರ,ರಾಜ್ಯವಲಯದಿಂದ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ,ಖರ್ಚು ಮತ್ತು ಖರ್ಚು ಮಾಡಲು ಟೆಂಡರ್ ಹಂತದಲ್ಲಿರುವ ಕಾಮಗಾರಿಗಳ ವಿವರ ನೀಡಿದರು.ಡಿಡಿಪಿಐ ಜವರೇಗೌಡಮಾತನಾಡಿ, ಜಿಲ್ಲೆಯ ೪೯ ಹೈಸ್ಕೂಲ್‌ಗಳಿಗೆ ಸ್ಮಾರ್ಟ್‌ಕ್ಲಾಸ್ ಸೌಲಭ್ಯಗಳನ್ನುಒದಗಿಸಲು ೧.೫೮ ಕೋಟಿ ರೂ.ವೆಚ್ಚದ ಟೆಂಡರ್ ಕರೆದಿದ್ದು, ಜನವರಿ ಅಂತ್ಯದೊಳಗೆ ಖರ್ಚು ಮಾಡುತ್ತೇವೆ. ಹೆಚ್ಚುವರಿ ನಿರ್ಮಾಣದ ಕಾಮಗಾರಿಗಳಿಗೆ ಪಂಚಾಯತ್‌ರಾಜ್ ಇಲಾಖೆಗೆ ಅನುದಾನ ಕೊಡಲಾಗಿದೆ. ಅವರು ಕಾಮಗಾರಿ ಆರಂಭಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧೪ ವಿದ್ಯಾರ್ಥಿನಿಲಯಗಳ ಕಾಮಗಾರಿ ಶುರುವಾಗಿದ್ದು, ೨೯ ಲಕ್ಷ ವೆಚ್ಚದಲ್ಲಿ ಕೆಲವು ರಿಪೇರಿ ಕಾಮಗಾರಿ ಶುರು ಮಾಡಲಾಗಿದೆ. ಆಯುಷ್ ಇಲಾಖೆ ವತಿಯಿಂದ ಮೂರು ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದುವಿವರಿಸಿದರು. ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ಕೊರೊನಾ ಬಂದ ಮೇಲೆ ಎಸ್‌ಆರ್ ದರವನ್ನು ಹೆಚ್ಚಿನ ಮಟ್ಟದಲ್ಲಿ ಹಾಕುತ್ತಿದ್ದಾರೆ. ಹೊಸ ಗುತ್ತಿಗೆದಾರರು ವಹಿವಾಟು ತೋರಿಸಬೇಕಿರುವ ಕಾರಣ ಹೆಚ್ಚಿನ ಮಟ್ಟದಲ್ಲಿ ನಮೂದಿಸುತ್ತಿದ್ದಾರೆ. ಹಳೆಯ ಗುತ್ತಿಗೆದಾರರಿಂದ ಈ ಸಮಸ್ಯೆ ಇಲ್ಲ. ಹೊಸದಾಗಿ ಕಾಮಗಾರಿ ಮಾಡಲಿರುವವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ,ಮರು ಟೆಂಡರ್‌ಗಳನ್ನು ಕರೆಯುವಂತಾಗಿದೆ ಎಂದು ತಿಳಿಸಿದರು.