

ಆನೇಕಲ್: ಕಾಚನಾಯಕನಹಳ್ಳಿ ಕೆರೆ ಅಂಗಳದಲ್ಲಿ ಶನಿವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶದ ಮೇರೆಗೆ ಬೆಂಗಳೂರು ನಗರ ಜಿಲ್ಲಾಡಳಿತ ರಾಜಕಾಲುವೆ ಒತ್ತುವರಿ ತೆರವು ಮಾಡಿತು.
ಕೆರೆಗೆ ಕೊಳಚೆ ನೀರು ತುಂಬಿಕೊಂಡು ಹೊರ ಹರಿವಿಗೆ ದಾರಿ ಇಲ್ಲದೆ ಕೆರೆ ಮಲಿನಗೊಂಡ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. 23 ಎಕರೆ ಇರುವ ಕೆರೆಯಲ್ಲಿ 1.27 ಎಕರೆಗೂ ಹೆಚ್ಚು ಜಾಗವನ್ನು ಒತ್ತುವರಿ ಮಾಡಿದ್ದಾರೆ. ಜೆಸಿಬಿಗಳ ಮೂಲಕ 2.8 ಕಿ.ಮೀ ಉದ್ದದ ರಾಜಕಾಲುವೆ ತೆರವು ಆರಂಭವಾಗಿದೆ. ಇದು ಮುಂದಿನ 10 ದಿನಗಳೊಳಗೆ ಮುಗಿಯುವ ಸಾಧ್ಯತೆ ಇದೆ.
ಕಾಚನಾಯಕನಹಳ್ಳಿ ಕೆರೆಯಿಂದ ಚಂದಾಪುರ ಹಾಗೂ ಹೆನ್ನಾಗರ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳ ಒತ್ತುವರಿ ತೆರವು ಮಾಡಲಾಗುತ್ತಿದೆ. ಈ ಕೆರೆಯ ನೀರು ಮಲಿನವಾಗಿರುವ ಹಾಗೂ ರಾಜಕಾಲುವೆ ಒತ್ತುವರಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದವರೆಗೆ ಹಲವು ದೂರು ಹೋಗಿದ್ದವು. ಇದನ್ನು ಪರಿಗಣಿಸಿ ರಾಜಕಾಲುವೆ ತೆರವಿಗೆ ಆದೇಶವಾಗಿದೆ ಎಂದು ಕೆರೆ ಉಳಿವು ಹೋರಾಟದ ನೇತೃತ್ವ ವಹಿಸಿರುವ ಕ್ಯಾಪ್ಟನ್ ಸಂತೋಷ್‌ಕುಮಾರ್ ತಿಳಿಸಿದ್ದಾರೆ.
ರಾಜಕಾಲುವೆ ಹಾದು ಹೋಗುವ ಜಾಗದಲ್ಲಿ ಖಾಸಗಿ ಬಡಾವಣೆಯವರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ದೂರು ಸಲ್ಲಿಸಲಾಗಿತ್ತು ಎಂದು ಹೆನ್ನಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ ತಿಳಿಸಿದರು.
ಹೆನ್ನಾಗರ ಗ್ರಾಪಂ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಗ್ರಾಪಂ ಸದಸ್ಯ ವಿನಯ್, ಕಿರಣ್, ಮನು ಮತ್ತಿತರರಿದ್ದರು.
ಗಮನಸೆಳೆದ ವಿಜಯವಾಣಿ: ಕೆರೆ ಕಲುಷಿತವಾಗಲು ಕಾರಣ ಹಾಗೂ ಅಕ್ಕಪಕ್ಕದ ಬಡಾವಣೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಇತ್ತೀಚೆಗೆ ವಿಜಯವಾಣಿ ವರದಿ ಮಾಡಿತ್ತು. ಇದು ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಕಾರ್ಯಾಚರಣೆ ಆರಂಭವಾಗಿದೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಈ ಭಾಗದ ಬಹುತೇಕ ಕೆರೆಗಳು ತುಂಬಿದ್ದು, ರಾಜಕಾಲುವೆಗಳು ಒತ್ತುವರಿಯಾಗಿ ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಸದ್ಯ ಒತ್ತುವರಿಗೆ ಕ್ರಮ ಕೈಗೊಳ್ಳಲಾಗಿದ್ದು, ಕೆರೆಗಳ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕಿದೆ. ಪ್ರಸನ್ನ ಕುಮಾರ್, ಹೆನ್ನಾಗರ ಗ್ರಾಪಂ ಉಪಾಧ್ಯಕ್ಷ.