ಕಾಂಗ್ರೇಸ್ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಂಡು ಬರಬೇಕು / ಗುಂಪು ರಾಜಕಾರಣ ಮಾಡಿದರೆ ಸಹಿಸಲು ಸಾಧ್ಯವಿಲ್ಲ / ಸಚಿವ ಬೈರತಿ ಸುರೇಶ್ ಎಚ್ಚರಿಕೆ / ಏ.೪ ರಂದು ಗೌತಮ್‌ರಿಂದ ನಾಮಪತ್ರ ಸಲ್ಲಿಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಬಣ ರಾಜಕಾರಣವನ್ನು ಬದಿಗೊತ್ತಿ ಅಭ್ಯರ್ಥಿಯಾಗಿರುವ ಗೌತಮ್ ರವರನ್ನು ಗೆಲ್ಲಿಸಿಕೊಂಡು ಬರಬೇಕು. ಇನ್ನು ಮುಂದೆ ಗುಂಪು ರಾಜಕಾರಣ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಕಾಲಾವಕಾಶ ಕಡಿಮೆ ಇರುವುದರಿಂದ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ ಮತ ಪಡೆಯುವ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಬೆಂಗಳೂರಿನ ಸಚಿವ ಬೈರತಿ ಸುರೇಶ್ ರವರ ಮನೆಯಲ್ಲಿ ಭಾನುವಾರ ಕರೆಯಲಾಗಿದ್ದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳ ಶಾಸಕರು, ಮಾಜಿ ಶಾಸಕರು, ಪರಾಭವಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸೋಮವಾರದಿಂದ ಅಭ್ಯರ್ಥಿಯನ್ನು ಜಿಲ್ಲೆಯಲ್ಲಿ ದಿನಕ್ಕೆ ಎರಡು ತಾಲ್ಲೂಕುಗಳಂತೆ ಪ್ರತಿ ತಾಲ್ಲೂಕಿನಲ್ಲಿ ಪರಿಚಯಿಸುವ ಕೆಲಸ ಮಾಡಬೇಕು ಎಂದರು.

ಏಪ್ರಿಲ್ ೪ರಂದು ನಾಮಪತ್ರ ಸಲ್ಲಿಸಲಾಗುವುದು. ಸೋಮವಾರ ಬೆಳ್ಳಿಗ್ಗೆ ೯.೩೦ ಗಂಟೆಗೆ ಮುಳಬಾಗಿಲಿ ಕುರುಡುಮಲೆಯ ಗಣಪತಿ ದೇವಸ್ಥಾನ ಪೂಜೆ ಸಲ್ಲಿಸಿ ಮುಳಬಾಗಿಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಂತರ ಚಿಂತಾಮಣಿಯಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗುವುದು. ಮಂಗಳವಾರ ಕೋಲಾರ ಮತ್ತು ಮಾಲೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು. ಬುಧವಾರವೂ ಉಳಿದ ತಾಲ್ಲೂಕುಗಳಲ್ಲಿ ಕಾರ್ಯಕರ್ತರ ಸಭೆ ಮತ್ತು ಮುಖಂಡರ ಹಾಗೂ ಕಾರ್ಯಕರ್ತರನ್ನು ಪರಿಚಯಿಸುವ ಕೆಲಸ ಮಾಡಿ, ಏ.೪ ರಂದು ಅಭ್ಯರ್ಥಿ ಗೌತಮ್ ರಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಇದೆ ಎಂದು ಬೈರತಿ ಸುರೇಶ್ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ ಶಾಸಕರು ಹಾಗೂ ಮಾಜಿ ಶಾಸಕರು ಮತ್ತು ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳು ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಅಭ್ಯರ್ಥಿ ಗೌತಮ್ ಹೈಕಮ್ಯಾಂಡ್ ಟಿಕೇಟ್ ನೀಡಿದರೆ ಎಲ್ಲರ ಅಭಿಪ್ರಾಯ ಪಡೆದು ಎಲ್ಲರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ನೀಡದಂತೆ ಕೆಲಸ ಮಾಡುತ್ತೇವೆ, ನಿಮ್ಮ ಸಹಕಾರ ನಮಗೆ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಎಂ.ಎಲ್.ಸಿ. ಅನಿಲ್‌ಕುಮಾರ್, ಪರಾಭವಿತ ಅಭ್ಯರ್ಥಿಗಳಾದ ಮುಳಬಾಗಿಲಿನ ಆದಿನಾರಾಯಣ, ಶಿಡ್ಲಘಟ್ಟದ ಪುಟ್ಟುಆಂಜಿನಪ್ಪ, ರಾಜುಗೌಡ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಕೋಲಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್‌ಕುಮಾರ್, ನಗರಘಟಕದ ಅಧ್ಯಕ್ಷ ಪ್ರಸಾದ್‌ಬಾಬು, ಸೇರಿದಂತೆ ತಾಲ್ಲೂಕು ಘಟಕಗಳ ಅಧ್ಯಕ್ಷ, ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

ಗೈರು ಹಾಜರಾಗಿದ್ದವರು :
ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಜಿ.ಎಫ್.ಶಾಸಕಿ ರೂಪಕಲಾ, ವಿವಿಧ ಕಾರಣಗಳ ನೆಪದಲ್ಲಿ ಗೈರು ಹಾಜರಾಗಿದ್ದರು.

ತಣ್ಣಗಾಗದ ಮುನಿಸು :
ಕೆ.ಹೆಚ್.ಮುನಿಯಪ್ಪರವರ ಅಳಿಯ ಚಿಕ್ಕಪೆದ್ದನ್ನನವರಿಗೆ ಟಿಕೇಟ್ ನೀಡಲಿಲ್ಲ ಎಂಬ ಮುನಿಸು ಕೆ.ಹೆಚ್.ಮುನಿಯಪ್ಪ ಮತ್ತು ಅವರ ಕುಟುಂಬದಲ್ಲಿ ಇನ್ನೂ ಮುಂದುವರೆದಿದೆ ಎನ್ನಲಾಗಿದೆ.

ಕೋಟ್
ಕೋಲಾರಕ್ಕೆ ಕಾಂಗ್ರೇಸ್ ಅಭ್ಯರ್ಥಿ ಹೊರಗಿನವರು ಎಂಬುದು ಇದೇನು ಹೊಸದೇನಲ್ಲ. ಈಗಾಗಲೇ ಕಾಂಗ್ರೇಸ್ ನಿಂದ ದೊಡ್ಡತಿಮ್ಮಯ್ಯ, ವೈ.ರಾಮಕೃಷ್ಣ ಇವರೂ ಸಹ ಹೊರಗಿನವರೇ ಆಗಿದ್ದರು. ಜನತಾ ಪಕ್ಷದಿಂದ ಒಂದು ಬಾರಿ ಆಯ್ಕೆ ಆದ ವಿ.ವೆಂಕಟೇಶ್ ಇವರು ಸಹ ಹೊರಗಿನವರೇ ಆಗಿದ್ದರು. ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿ ಸೇರಿದಂತೆ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕೋಲಾರ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹೊರಗಿನವರು ಬಂದು ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದಾರೆ.

-ಎಂ.ಎಲ್.ಅನಿಲ್ ಕುಮಾರ್, ಎಂ.ಎಲ್.ಸಿ.

ಚಿತ್ರ ೩೧ ಕೆ.ಎಲ್.ಆರ್. ೦೧ : ಸಚಿವ ಬೈರತಿ ಸುರೇಶ್ ರವರು ಮನೆಯಲ್ಲಿ ನಡೆದ ಸಭೆಯ ನಂತರ ಹೊರ ಬಂದ ಕೋಲಾರದ ಶಾಸಕರು ಮತ್ತು ಮಾಜಿ ಶಾಸಕರು, ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net