ಕಾಂಗ್ರೆಸ್‌ನಿಂದ ಬಾಲ ಮಂಚ್ ಘಟಕ

Youth Congress 9-09
Published on

ಬೆಂಗಳೂರು: ಕಾಂಗ್ರೆಸ್ ಹೊಸ ಘಟಕವನ್ನು ರಾಜ್ಯದಲ್ಲಿ ಪರಿಚಯಿಸುತ್ತಿದೆ. ಪಕ್ಷದಿಂದಲೇ ನಿರ್ವಹಣೆಯಾದರೂ ಅಧಿಕೃತವಾಗಿ ಎಲ್ಲೂ ಕಾಂಗ್ರೆಸ್ ನಂಟು ಕಾಣಿಸದ ಜವಾಹರ ಬಾಲ ಮಂಚ್ ತನ್ನ ಚಟುವಟಿಕೆ ಆರಂಭಿಸಿದೆ.

ಪಕ್ಷದ ಕಾರ್ಯಕರ್ತರಾದ ಸಿರಿಲ್ ಪ್ರಭು ಮತ್ತು ತ್ರಿಭುವನ್ ಗೌಡ ನೇತೃತ್ವದಲ್ಲಿ 9 ಜನರ ರಾಜ್ಯ ತಂಡವನ್ನು ಜವಾಹರ ಬಾಲ ಮಂಚ್ ರಾಷ್ಟ್ರೀಯ ಯೋಜನಾ ಸಂಚಾಲಕಿ, ಸಂಸದೆ ರಮ್ಯ ಹರಿದಾಸ್  ಘೋಷಿಸಿದ್ದಾರೆ. ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸಂಸ್ಕೃತಿ ಕುರಿತಂತೆ ಈ ಸಂಘಟನೆ ಕೆಲಸ ಮಾಡಲಿದ್ದು, ರಾಜಕೀಯದಿಂದ ಹೊರತಾಗಿರುವುದಾಗಿ ಹೇಳಿಕೊಂಡಿದೆ. ಕರ್ನಾಟಕ ಘಟಕದ ಉಪಾಧ್ಯಕ್ಷ ತ್ರಿಭುವನ್ ಗೌಡ ಈ ಬಗ್ಗೆ ವಿವರಣೆ ನೀಡಿ, ಜಿಲ್ಲಾ ಮತ್ತೆ ವಿಧಾನಸಭಾ ಕ್ಷೇತ್ರವಾರು ಘಟಕವನ್ನು ರಚಿಸುತ್ತೇವೆ. ತಿಂಗಳಿಗೆ ಒಂದು ಅಥವಾ ಎರಡು ಕಾರ್ಯಕ್ರಮವನ್ನು ಮಾಡುತ್ತಾ ಮುಂದಿನ ದಿನಗಳಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುತ್ತೇವೆ ಎಂದರು.

2007ರಲ್ಲಿ ಕೇರಳದಲ್ಲಿ ಈ ಪ್ರಯೋಗ ನಡೆದಿದ್ದು, ಯಶಸ್ವಿಯಾಗಿದೆ. ಇದೀಗ ಕರ್ನಾಟಕದಲ್ಲೂ ಜಾರಿ ಮಾಡಲಾಗುತ್ತಿದೆ. 10ರಿಂದ 17 ವರ್ಷದ ಮಕ್ಕಳಿಗಾಗಿ ಸ್ಪರ್ಧೆಗಳು, ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ಇಲ್ಲಿ ರಾಜಕೀಯ ವಿಷಯ, ಸಿದ್ಧಾಂತದ ಚರ್ಚೆ ಇರುವುದಿಲ್ಲ ಎಂದು ವಿವರಿಸಿದರು.

ಈ ಘಟಕ ಘೋಷಣೆಗೆ ಮುನ್ನ ಪ್ರಾಯೋಗಿಕವಾಗಿ ಒಂದು ಸ್ಪರ್ಧೆ ನಡೆಸಿದ್ದು, 1400ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ಕಳಿಸಿಕೊಡಲಾಗಿದೆ. ಮುಂದೆ ಕರೊನಾ ಕುರಿತಂತೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದೇವೆ. ಕರೊನಾ ತಗ್ಗಿದ ಮೇಲೆ ಮಕ್ಕಳನ್ನು ಒಂದು ಕಡೆ ಸೇರಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ತಿಳಿಸಿದರು.

ಮಕ್ಕಳಲ್ಲಿ ಸ್ಪೂರ್ತಿ ನೀಡುವುದು, ರಾಷ್ಟ್ರಭಕ್ತಿ ಉದ್ದೀಪನಗೊಳಿಸುವುದು, ಇತಿಹಾಸದ ಕುರಿತು ತಿಳಿಸುವ ಕಾರ್ಯ ಮಾಡಲಾಗುತ್ತದೆ. ಎಲ್ಲಾ ಜಿಲ್ಲೆ ಮತ್ತು ವಿಧಾನಸಭೆ ಘಟಕಗಳ ರಚನೆಯಾದ ಬಳಿಕ ರಾಜ್ಯ ಮಟ್ಟದ ಸ್ಪರ್ಧೆ ಸಹ ನಡೆಸುವ ಗುರಿಯನ್ನೂ ಸಂಘಟನೆ ಹೊಂದಿದೆ.

ಆರ್‌ಎಸ್‌ಎಸ್ ಮಕ್ಕಳನ್ನು ಸಂಘಟಿಸುವಂತಹ ಚಟುವಟಿಕೆಯನ್ನು ಈ ಜವಾಹರ ಬಾಲಮಂಚ್ ಘಟಕ ನಡೆಸಬೇಕೆಂಬ ಗುರಿ ಹೊಂದಿದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ರಾಷ್ಟ್ರೀಯತೆ ಹೆಸರಲ್ಲಿ ಬಿಜೆಪಿ ಯುವಕರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆದಿರುವುದೇ ಕಾಂಗ್ರೆಸ್ ಈ ಹಿನ್ನೆಡೆಗೆ ಕಾರಣ ಎಂದರಿತ ಪಕ್ಷ ತಾನೂ ಸಹ ಸಂಘಟನಾತ್ಮಕ ಪ್ರಯತ್ನವಾಗಿ ವಿವಿಧ ಚಟುವಟಿಕೆ ನಡೆಸುತ್ತಿದೆ. ಅದರ ಒಂದು ಭಾಗ ಬಾಲ ಮಂಚ್ ಎಂಬ ಅಭಿಪ್ರಾಯವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net