

ನಂಜನಗೂಡು: ನಗರಸಭೆಯಲ್ಲಿ ಅವೈಜ್ಞಾನಿಕವಾಗಿ ನಡೆಸಿರುವ ಅಭಿವೃದ್ಧಿ ಕಾಮಗಾರಿಗಳ ತನಿಖೆ ನಡೆಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಪರಿಷ್ಕೃತ ನೀರಿನ ಬಿಲ್ ದರವನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರಸಭೆ ಕಚೇರಿ ಮುಂಭಾಗ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್ ಮಾತನಾಡಿ, ನಗರಸಭೆಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ನಗರದ ಚಾಮಲಾಪುರ ಹುಂಡಿ ಬಡಾವಣೆಯಲ್ಲಿ ಮುಡಾ ವತಿಯಿಂದ ನಡೆಯುತ್ತಿರುವ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಚರಂಡಿ ನೀರು ಹರಿಯದೆ ನಿಂತಲ್ಲೆ ನಿಂತು ಸೋರಿಕೆಯಾಗುತ್ತಿದೆ. ಜತೆಗೆ ಚರಂಡಿ ಮೇಲೆ ಕವರ್‌ಡೆಕ್ ನಿರ್ಮಿಸದೆ ಹಳೆಯ ರಸ್ತೆ ಕೂಡ ಮುಚ್ಚಿಹೋಗಿದೆ. ಇದರಿಂದ ಕೋರೆಹುಂಡಿ, ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ತೊಂದರೆಯಾಗಿದೆ. ನಗರದ ಎಲ್ಲ ಬಡಾವಣೆಗಳಲ್ಲಿ ಮುಡಾ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ತನಿಖೆ ನಡೆಸುವಂತೆ ಆಗ್ರಹಿಸಿದರು.
247 ಕುಡಿಯುವ ನೀರಿನ ಬಿಲ್‌ಗಳು 60 ರಿಂದ 70 ಸಾವಿರದವರೆಗೆ ಒಮ್ಮೆಲೆ ಬರುತ್ತಿದ್ದು ಈ ಬಗ್ಗೆ ಈ ಹಿಂದೆ ಪ್ರತಿಭಟನೆ ನಡೆಸಿದ ಮೇಲೆ ದರ ಪರಿಷ್ಕರಿಸುವ ಭರವಸೆ ನೀಡಿದ್ದರೂ ಇದುವರೆಗೂ ಕ್ರಮವಹಿಸಿಲ್ಲ. ಆದ್ದರಿಂದ ಹಿಂದಿನ ಬಿಲ್ ವಜಾಗೊಳಿಸಿ ಹೊಸ ಪರಿಷ್ಕೃತ ದರ ನಿಗದಿಪಡಿಸಬೇಕು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಹೊಸ ರಸ್ತೆಗಳನ್ನೇ ಅಗೆದು ಹಾಳು ಮಾಡುತ್ತಿದ್ದಾರೆ. ಅಲ್ಲದೆ ಎಲ್ಲ ಕಡೆ ಮ್ಯಾನ್‌ಹೋಲ್‌ಗಳನ್ನು ಮುಚ್ಚದೆ ಅಪಾಯಕ್ಕಾಗಿ ಆಹ್ವಾನಿಸುತ್ತಿವೆ ಎಂದು ಆಪಾದಿಸಿದರು.
ನಂತರ ನಗರಸಭಾ ಪೌರಾಯುಕ್ತ ರಾಜಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.
ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ಲತಾ ಸಿದ್ದಶೆಟ್ಟಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿಂ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್, ಮುಖಂಡರಾದ ರಾಜೇಶ್, ಕರಳಪುರ ನಾಗರಾಜು, ದೊರೆಸ್ವಾಮಿನಾಯಕ, ಶಿವಪ್ಪದೇವರು, ಡಿ.ಆರ್.ರಾಜು, ಸೌಭಾಗ್ಯ, ಸೋಮಣ್ಣ, ಶೈಲಜ, ರವಿ, ನಗರಸಭಾ ಸದಸ್ಯರಾದ ಗಂಗಾಧರ್, ಎಸ್.ಪಿ.ಮಹೇಶ್, ಸಿದ್ದಿಖ್, ಹುಂಡಿ ನಾಗರಾಜು, ಕಮಲೇಶ್, ಸುಬ್ಬೇಗೌಡ, ಭದ್ರೇಗೌಡ, ರವಿ, ಮಹದೇವು, ರಾಮು ಭಾಗವಹಿಸಿದ್ದರು.