ಕವಿಗಳನ್ನು ಪುಳಕಗೊಳಿಸುವ ಶ್ರಾವಣ ಮಾಸ. ಹಾಡು, ಸಾಹಿತ್ಯದ ಮೂಲಕ ವಿಶಿಷ್ಟ ಕೊಡುಗೆ; ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿಕೆ

27bdvt2 WEB
Published on

ಭದ್ರಾವತಿ: ಶ್ರಾವಣ ಮಾಸ ಎಂಬುದು ಎಲ್ಲ ಕವಿಗಳನ್ನು ಪುಳಕಿತಗೊಳಿಸುತ್ತದೆ. ಹಾಗಾಗಿ ಕವಿಗಳು ಶ್ರಾವಣ ಮಾಸದ ಬಗ್ಗೆ ಹಲವಾರು ಹಾಡು, ಸಾಹಿತ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಹಾಗೂ ಹಳೇನಗರ ಮಹಿಳಾ ಸೇವಾ ಸಮಾಜದಿಂದ ಮಂಗಳವಾರ ಏರ್ಪಡಿಸಿದ್ದ ಮುಂಗಾರು ಜಾನಪದ ಸಂಭ್ರಮದ ಜಾನಪದ ಗೀತೆಗಳ ಸಮೂಹ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ನಿಸರ್ಗದತ್ತವಾದ ಪ್ರಕೃತಿ ಸಂಪತ್ತಿನ್ನು ಉಳಿಸಿ ಬೆಳೆಸಬೇಕಿದೆ. ಇಲ್ಲದಿದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡು ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ಪರಿಣಾಮದಿಂದ ಮುಂದೆ ಎಲ್ಲರೂ ಮಾನಸಿಕ ದಾರಿದ್ರ್ಯರಾಗುತ್ತೇವೆ ಎಂದು ಎಚ್ಚರಿಸಿದರು.

ನಾವು ಬಹುತ್ವದ ಸಮಾಜದಲ್ಲಿ ಎಲ್ಲರ ಜತೆ ಬದುಕನ್ನು ಕಟ್ಟಿಕೊಂಡು ಬಾಳೋಣ. ಸಾಹಿತ್ಯ, ಸಾಂಸ್ಕೃತಿಕ ಸಂಗತಿಗಳತ್ತ ನಮ್ಮ ಮನಸ್ಸನ್ನು ಕೇಂದ್ರೀಕರಿಸೋಣ. ಆ ಮೂಲಕ ಸುಂದರ ಸಮಾಜವನ್ನು ನಿರ್ಮಾಣ ಮಾಡೋಣ ಎಂದರು.

ಜಾನಪದ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ 13 ಮಹಿಳಾ ತಂಡಗಳು ಭಾಗವಹಿಸಿದ್ದು ಅದರಲ್ಲಿ ಸುಮತಿ ಕಾರಂತ್ ತಂಡ ಪ್ರಥಮ, ವೀರಾಂಜನೇಯ ತಂಡ ದ್ವಿತೀಯ, ಕಣಿವೆ ಮಾರಿಯಮ್ಮ ತಂಡ ತೃತೀಯ ಬಹುಮಾನ ಪಡೆಯಿತು.

ಬಿಇಒ ಎ.ಕೆ.ನಾಗೇಂದ್ರಪ್ಪ, ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ರಾವ್, ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಎಂ.ಎಸ್.ಸುಧಾಮಣಿ, ಗೊಂದಿ ಜಯರಾಮ್, ಎಚ್.ಆರ್.ಶ್ರೀಧರೇಶ್ ಭಾರದ್ವಾಜ್, ಅನ್ನಪೂರ್ಣಾ ಸತೀಶ್, ಮೋಹನ್‌ಕುಮಾರ್, ಲತಾ ಪಿ. ಗೌಡ, ಎಚ್.ಆರ್.ಸುಧಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net