

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಜೆಟ್ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ನೆರವು ಮತ್ತು ಆಧಾರದೊಂದಿಗೆ ಸರ್ವರನ್ನೂ ಒಳಗೊಂಡ ಕಲ್ಯಾಣ ರಾಜ್ಯ ಕಟ್ಟುವ ಕನಸಿನ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶ್ಲಾಘಿಸಿದ್ದಾರೆ.
ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಎಸ್ಸಿ, ಎಸ್ಟಿ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ, ಸಾರಿಗೆ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಸಿಎಂ ಅತ್ಯುತ್ತಮ ಎನಿಸುವ ಯೋಜನೆಗಳನ್ನು ನೀಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿ ರೂ. ಈ ಹಿಂದಿನ ಬಜೆಟ್ ಗಾತ್ರ 3,71,383 ಕೋಟಿ ರೂ. ಅಂದರೆ ಒಂದು ವರ್ಷಕ್ಕೆ 38,166 ಕೋಟಿ ಹೆಚ್ಚಾಗಿದೆ. ಬಜೆಟ್ ಗಾತ್ರ ಹೆಚ್ಚಾಗಿದೆ ಎಂದರೆ ರಾಜ್ಯದ ಬೆಳವಣಿಗೆಯು ಶೇ.10.3 ರಷ್ಟು ಹೆಚ್ಚಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಬಜೆಟ್‌ನಲ್ಲಿ 2,92,477 ಕೋಟಿಯಷ್ಟು ಹಣ ವಿವಿಧ ತೆರಿಗೆಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗುವ ನಿರೀಕ್ಷೆಯಲ್ಲಿದ್ದೇವೆ. 1,16,000 ಕೋಟಿಯಷ್ಟು ಸಾಲ ಮಾಡಬೇಕಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಸ್ಯಾಡಿಸ್ಟ್ ಮೈಂಡ್‌ಸೆಟ್ ಇಟ್ಟುಕೊಂಡು ಟೀಕೆ ಮಾಡುವ ಪ್ರವೃತ್ತಿಯುಳ್ಳ ವ್ಯಕ್ತಿಗಳು ಎಂದು ಜರಿದರು.
ನಮ್ಮಿಂದ ತಪ್ಪಿದ್ದರೆ ಅವರು ದಾಖಲೆಗಳ ಸಮೇತ ಬಂದರೆ ನಾವು ತಪ್ಪನ್ನು ತಿದ್ದುಕೊಳ್ಳುವ ಕೆಲಸ ಮಾಡುತ್ತೇವೆ. ಅದನ್ನು ಬಿಟ್ಟು ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಸೇರಿದಂತೆ ಇತರ ಬಿಜೆಪಿ ನಾಯಕರು ಸಾಲ ಮಾಡಿದ್ದೇ ಸಾಧನೆ ಅನ್ನುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. 2013ರಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಾಜ್ಯದ ಸಾಲ 1.7 ಲಕ್ಷ ಕೋಟಿ ರೂ. 2018ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಬಿಡುವ ಸಂದರ್ಭದಲ್ಲಿ 2.85 ಲಕ್ಷ ಕೋಟಿ ರೂ. ಸಾಲವಿತ್ತು ಎಂದು ಮಾಹಿತಿ ನೀಡಿದರು.
ನಮ್ಮ ರಾಜ್ಯದ ಬೆಳವಣಿಗೆಯ ಜಿಡಿಪಿ ಶೇ. 7.4 ಇದೆ. ಆದರೆ ದೇಶದ ಜಿಡಿಪಿ ಶೆ.6.2 ಇದೆ. ಅಂದರೆ ರಾಜ್ಯದ ಜಿಡಿಪಿ ದೇಶದ ಜಿಡಿಪಿಗಿಂತ ಮುಂದುವರಿದಿದೆ. ವಿರೋಧ ಪಕ್ಷದ ನಾಯಕರು ಇದರ ಬಗ್ಗೆ ಮಾತನಾಡುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ ಆಡಳಿತ ಮಾಡಿದ್ದ ಬಿಜೆಪಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹರಾಜಕತೆಯತ್ತ ಕೊಂಡೊಯ್ದಿದ್ದರು ಎಂದು ಆರೋಪಿಸಿದರು.
ಬಿಜೆಪಿ ಅವರ ಆಡಳಿತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಿಎಂ ಸಿದ್ದರಾಮಯ್ಯ ಸತತವಾಗಿ ಎರಡು ವರ್ಷದಿಂದ ನಿರಂತರವಾಗಿ ಪ್ರಯತ್ನಪಡುತ್ತಿದ್ದಾರೆ. 2024-25ರಲ್ಲಿ ರಾಜ್ಯದ ಕೃಷಿ ಬೆಳವಣಿಗೆ ಶೇ.4ರಷ್ಟಿದೆ. ಆದರೆ ದೇಶದ ಕೃಷಿ ಬೆಳವಣಿಗೆ ಶೇ.3.8ರಷ್ಟಿದೆ. ಅಂದರೆ ರಾಜ್ಯವು ರಾಷ್ಟ್ರಕ್ಕಿಂತ ಮುಂದುವರಿದಿದೆ. ಇದರೆ ಬಗ್ಗೆ ಮಾತನಾಡದೆ ಇವರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡದೆ ಹೋದರೆ ಅವರಿಗೆ ದೇಹದಲ್ಲಿ ರಕ್ತವೇ ಹರಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇದ್ದರು.