

ರಾಣೆಬೆನ್ನೂರ: ತಾಲೂಕಿನ ಹನುಮನಹಳ್ಳಿ-ತೆರೆದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್ ಗ್ರೀನ್ ಎನರ್ಜಿ ಬಯೋ ಡಿಫೈನರೈಜ್ ಆ್ಯಂಡ್ ಎಥೆನಾಲ್ ಪ್ರೋಡಕ್ಷನ್ ಕಂಪನಿಯ ಕಲುಷಿತ ನೀರು ಕುಮುದ್ವತಿ ನದಿಗೆ ಹರಿಯುತ್ತಿರುವ ಕಾರಣ ನದಿಪಾತ್ರದಲ್ಲಿದ್ದ ಮೀನುಗಳು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ನದಿಪಾತ್ರದಲ್ಲಿ ಹೆಚ್ಚಿನ ಪ್ರಮಾಣದ ನೀರು ಇಲ್ಲದ ಕಾರಣ ಮೀನುಗಳ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಇದೀಗ ಕಲುಷಿತ ನೀರು ನದಿಗೆ ಸೇರಿದ್ದರಿಂದ ಅಳಿದುಳಿದ ಮೀನುಗಳು ಮೃತಪಟ್ಟಿವೆ. ನದಿ ನೀರು ಹೀಗೆ ತುಂಗಭದ್ರಾ ಸೇರಿದರೆ ನೀರನ್ನು ಕುಡಿಯಲು ಬಳಸುತ್ತಿರುವ ರಾಣೆಬೆನ್ನೂರ ಹಾಗೂ ಬ್ಯಾಡಗಿ ಪಟ್ಟಣಗಳ ಜನರಿಗೂ ತೊಂದರೆ ಎದುರಾಗಲಿದೆ.
ಆದ್ದರಿಂದ ಜಿಲ್ಲಾಡಳಿತ ಕಂಪನಿಯವರಿಗೆ ಸೂಚಿಸಿ ಕೂಡಲೇ ನದಿಪಾತ್ರದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಮೀನುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕಂಪನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಆಗ್ರಹಿಸಿದ್ದಾರೆ.