

ನವದೆಹಲಿ: ಕರೊನಾ ಮಹಾಮಾರಿಯ ಕಬಂಧ ಬಾಹು ಭಾರತವನ್ನೂ ಒಳಗೊಂಡಂತೆ ಇಡೀ ಜಗತ್ತನ್ನು ಕಾಡುತ್ತಿರುವುದರ ನಡುವೆ ಅದನ್ನು ಕಟ್ಟಿ ಹಾಕಲು ಮೋದಿ ಸರ್ಕಾರ ಮಾಡಿದ ದೃಢ ಸಂಕಲ್ಪದ ಫಲವಾಗಿ 2021ರ ಜನವರಿ 16ರಂದು ದೇಶದಾದ್ಯಂತ ಲಸಿಕೆ ಪಯಣ ಆರಂಭವಾಗಿತ್ತು. ಅದಾದ 18 ತಿಂಗಳ ನಂತರ ದೇಶ ಇಡೀ ಜಗತ್ತು ಬೆಕ್ಕಸಬೆರಗಾಗಿ ನೋಡುವಂಥ 200 ಕೋಟಿ ಡೋಸ್ ದಾಟಿದ ದಾಖಲೆಯನ್ನು 2022 ಜುಲೈ 17ರಂದು ಸಾಧಿಸಿದೆ. ಶನಿವಾರ ರಾತ್ರಿ ವರೆಗೆ 5.48 ಕೋಟಿ ಬೂಸ್ಟರ್ ಡೋಸ್ ಸಹಿತ 199.97 ಕೋಟಿ ಡೋಸ್ ಲಸಿಕೆ ಹಾಕಲಾಗಿತ್ತು. ಭಾನುವಾರವೂ ದೇಶದೆಲ್ಲೆಡೆ ಲಸಿಕೆ ಅಭಿಯಾನ ಮುಂದುವರಿದಿದ್ದು 200 ಕೋಟಿ ಡೋಸ್ ದಾಟಿದ ದಾಖಲೆ ಮಾಡಿದೆ.
ಜಾಗತಿಕ ಲಸಿಕೆ ಪ್ರಮಾಣ: ‘ಅವರ್ ವರ್ಲ್ಡ್ ಇನ್ ಡೇಟಾ’ ಪೋರ್ಟಲ್ ಪ್ರಕಾರ ಜಗತ್ತಿನ ಜನಸಂಖ್ಯೆಯಲ್ಲಿ ಇದುವರೆಗೆ ಶೇಕಡ 62.1 ಜನರು ಕರೊನಾ ಲಸಿಕೆಯ ಸಂಪೂರ್ಣ ಡೋಸ್ ಪಡೆದಿದ್ದಾರೆ.
ಸ್ವದೇಶಿ ಲಸಿಕೆಗಳು: ಭಾರತದ ಲಸಿಕೆ ಅಭಿಯಾನದಲ್ಲಿ ಬಳಸಿದ ಮೊದಲೆರಡು ಲಸಿಕೆಗಳಾದ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ಸೆರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗಳು ಭಾರತದಲ್ಲೇ ತಯಾರಿಸಿದ್ದಾಗಿವೆ.
ಯಾವ ಭಾಗದಲ್ಲಿ ಎಷ್ಟು ಲಸಿಕೆ?: ಗ್ರಾಮೀಣ ಪ್ರದೇಶಗಳ ಕೇಂದ್ರಗಳಲ್ಲಿ ಶೇಕಡ 71, ನಗರ ಭಾಗದ ಕೇಂದ್ರಗಳಲ್ಲಿ ಶೇಕಡ 29ರಷ್ಟು ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ವಿವರಿಸಿದ್ದಾರೆ. ಒಟ್ಟು ಲಸಿಕೆಯಲ್ಲಿ ಶೇ. 48.9 ಮಹಿಳೆಯರು, ಶೇ. 51.5 ಪುರುಷರಿಗೆ ನೀಡಲಾಗಿದೆ.