ಕರೊನಾ ತಡೆಗೆ ಮಾನಸಿಕವಾಗಿ ಸಿದ್ಧರಾಗಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ

08 Nela Ph 07 DC Visit
Published on

ನೆಲಮಂಗಲ ಕರೊನಾ 3ನೇ ಅಲೆ ನಿಯಂತ್ರಣಕ್ಕೆ ಪ್ರತಿಯೊಬ್ಬ ಅಧಿಕಾರಿಯೂ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ನಗರದ ವಿಶ್ವೇಶ್ವರಪುರ ಗ್ರಾಮದ ಟಿಬೆಟಿಯನ್ ಹಾಸ್ಟೆಲ್‌ನಲ್ಲಿ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದರು. ಬಳಿಕ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿ ಮಾತನಾಡಿದರು.

ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನರ ಸಂಚಾರ ಸಾಕಷ್ಟು ಕಡಿಮೆಯಾಗಿದ್ದು, ಕರೊನಾ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ಅಧಿಕಾರಿಗಳು ಮಾನಸಿಕವಾಗಿ ಸಜ್ಜುಗೊಳ್ಳಬೇಕು. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ವ್ಯವಸ್ಥೆ, ಆಕ್ಸಿಜನ್‌ಪ್ಲಾಂಟ್, ಆಕ್ಸಿಜನ್ ಸೀಲಿಂಡರ್, ಐಸಿಯು ವ್ಯವಸ್ಥೆ ಸಂಪೂರ್ಣ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟ ಸುಮಾರು 650 ಮಂದಿ ಕುಟುಂಬಕ್ಕೆ ಸರ್ಕಾರದ ಸಹಾಯದ ಧನ 1 ಲಕ್ಷ ರೂ. ಚೆಕ್ ನೀಡಲಾಗಿದೆ ಎಂದರು.

ತಾಲೂಕಿನಲ್ಲಿ ಸುಮಾರು 56 ಮಂದಿಗೆ ಹೊಸದಾಗಿ ಕರೊನಾ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗುವುದು. ಜಿಲ್ಲೆಯಾದ್ಯಂತ ಪ್ರತಿನಿತ್ಯ ಸುಮಾರು 2,800 ಮಂದಿ ತಪಾಸಣೆ ಮಾಡುವಂತೆ ಸರ್ಕಾರದಿಂದ ಆದೇಶ ನೀಡಿದ್ದು, ಅದರಂತೆ ಸಿಬ್ಬಂದಿ ತಪಾಸಣೆ ಚುರುಕುಗೊಳಿಸಬೇಕು ಎಂದರು.

ಮುಂಜಾಗ್ರತ ಕ್ರಮ: ಜಿಲ್ಲೆಯಲ್ಲಿ ಬೆಡ್‌ಗಳು, ಆಕ್ಸಿಜನ್ ಕೊರತೆ ಇಲ್ಲ. ತಾಲೂಕಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಿಂದ 150 ಆಕ್ಸಿಜನ್ ಬೆಡ್, 300 ಸಾಮಾನ್ಯ ಬೆಡ್ ಸೇರಿ 500 ಲೀಟರ್ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಮಾಡಲಾಗಿದೆ. ನಗರಸಭೆಯಿಂದ ಸ್ಯಾನಿಟೈಸ್ ಮಾಡುವ ಜತೆಗೆ ಕೋವಿಡ್ ನಿಯಮ ಪಾಲನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹೊಟೇಲ್, ಬಾರ್, ಶಾಪಿಂಗ್ ಮಾಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಅಂತಹವರ ವಿರುದ್ಧ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ವಿಜಯಾ ಇ.ರವಿಕುಮಾರ್, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಪದವಿ ಪೂರ್ವಶಿಕ್ಷಣ ಇಲಾಖೆ ಉಪನಿರ್ದೇಶಕ ಆನಂದ್‌ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ, ತಹಸೀಲ್ದಾರ್ ಕೆ.ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಮೋಹನ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್, ನಗರಸಭೆ ಪೌರಾಯುಕ್ತ ಮಂಜುನಾಥ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಯ್ಯ, ರಾಜಸ್ವ ನಿರೀಕ್ಷಕರಾದ ಅಶ್ವತ್ಥ್, ಮಹೇಶ್‌ಕುಮಾರ್, ಸುದೀಪ್, ಎನ್.ಎಸ್.ಶಿವಪ್ರಸಾದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net