

ಎಚ್.ಡಿ.ಕೋಟೆ: ಕೇರಳದ ವಯನಾಡು ಜಿಲ್ಲೆ ಹಾಗೂ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಐದಾರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನದಿಗೆ ಹೆಚ್ಚು ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಗರಿಷ್ಠ ಮಟ್ಟ ಕಾಯ್ದುಕೊಂಡು ನದಿಗೆ 20 ಸಾವಿರ, ನಾಲೆಗೆ 1 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 21 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಅಣೆಕಟ್ಟೆಯ ಮುಂಭಾಗದ ಸೇತುವೆ ಮುಳುಗಿದ್ದು ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದೆ. ಮಂಗಳವಾರ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಆದರೂ ಸಾರ್ವಜನಿಕರು ನೀರಾವರಿ ಇಲಾಖೆ ಅಧಿಕಾರಿಗಳ ಮನವಿ ಲೆಕ್ಕಿಸದೆ ಸೇತುವೆ ಮೇಲೆ ಸಂಚರಿಸುತ್ತಿದ್ದರು. ಬುಧವಾರ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದ್ದು ಸೇತುವೆ ಎರಡು ಬದಿ ಗೇಟ್‌ಗೆ ಬೀಗ ಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಪೊಲೀಸ್ ಗಸ್ತು ಹಾಕಲಾಗಿದೆ. ವಾಹನಗಳನ್ನು ಸರಗೂರು ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.
ಜಲಾಶಯದ ಇಂದಿನ ಮಟ್ಟ: ಸರಾಸರಿ ಮಟ್ಟ 2284 ಅಡಿ ಇದ್ದು ಬುಧವಾರ ಸಂಜೆ ವೇಳೆಗೆ 2282.22 ಅಡಿ ಇತ್ತು. ಪ್ರಸ್ತುತ 18.31 ಟಿಎಂಸಿ ನೀರು ಸಂಗ್ರಹವಾಗಿದೆ.
ಜನರು ತತ್ತರ: ಐದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅರಣ್ಯದಂಚಿನ ಗ್ರಾಮಗಳ ರೈತರು ಜಮೀನಿಗೆ ತೆರಳಲು ಪ್ರಯಾಸ ಪಡುತ್ತಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ. ಮಂಗಳವಾರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿತ್ತು.