ಕಬಡ್ಡಿ ಪಂದ್ಯದಲ್ಲಿ ಮೇಟಿಕುಪ್ಪೆ ಜೆಎಸ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ

6HDK1
Published on

ಚ್.ಡಿ.ಕೋಟೆ: ತೀವ್ರ ಕುತೂಹಲ ಕೆರಳಿಸಿದ್ದ ಹೋಬಳಿ ಮಟ್ಟದ 16 ವರ್ಷದೊಳಗಿನ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾವಳಿಯಲ್ಲಿ ಮೇಟಿಕುಪ್ಪೆ ಜೆಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಸೇಂಟ್ ಮೇರಿಸ್ ಶಾಲೆಯ ಮಕ್ಕಳು ದ್ವೀತಿಯ ಸ್ಥಾನ ಪಡೆಯುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿತು.


ಪಟ್ಟಣದ ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣ ಅಧಿಕಾರಿ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಬಡ್ಡಿ ಪೈನಲ್ ಪಂದ್ಯಾವಳಿಯಲ್ಲಿ ಮೇಟಿಕುಪ್ಪೆ ಶಾಲೆಯು ಸೇಂಟ್ ಮೇರಿಸ್ ಶಾಲೆಗಿಂತ ಒಂದು ಅಂಕಗಳನ್ನು ಪಡೆದು ಜಯ ಗಳಿಸಿತು.


ಕಳೆದ ಶನಿವಾರ ಸೇಂಟ್ ಮೇರಿಸ್ ಶಾಲಾ ಆವರಣದಲ್ಲಿ ಹೋಬಳಿ ಮಟ್ಟದ ಫೈನಲ್ ಕಬಡ್ಡಿ ಪಂದ್ಯಾವಳಿಯು ಮೇಟಿಕುಪ್ಪೆ ಹಾಗೂ ಸೇಂಟ್ ಮೇರಿಸ್ ಶಾಲೆ ನಡುವೆ ನಡೆಯುತ್ತಿದ್ದಾಗ ಕಬಡ್ಡಿ ಪಂದ್ಯಾವಳಿಯಲ್ಲಿ ನಮ್ಮ ಮೇಟಿಕುಪ್ಪೆ ಶಾಲೆಯ ಮಕ್ಕಳಿಗೆ ತೀರ್ಪುಗಾರರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕಬಡ್ಡಿ ಪಂದ್ಯಾವಳಿಯನ್ನು ಅರ್ಧಕ್ಕೆ ನಿಲ್ಲಿಸಿ ಶಾಲಾ ಮಕ್ಕಳ ಜತೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ನೀಡಿ ಒತ್ತಾಯಿಸಿದ್ದರು.


ನಂತರ ಬಿಇಒ ಉದಯಕುಮಾರ್ ಅವರು ದೈಹಿಕ ಶಿಕ್ಷಣ ಅಧಿಕಾರಿ ರಾಮ ಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಂತೋಣಿ ಅವರನ್ನು ತಮ್ಮ ಕಚೇರಿಗೆ ಕರೆದು ಗ್ರಾಮಸ್ಥರು ಸಮ್ಮುಖದಲ್ಲಿ ವಿಚಾರಣೆ ನಡೆಸಿ ಅರ್ಧಕ್ಕೆ ನಿಂತ ಕಬಡ್ಡಿ ಪಂದ್ಯಾವಳಿಯನ್ನು ಮಂಗಳವಾರ ಪಟ್ಟಣದ ವಿಶ್ವ ಭಾರತಿ ಶಾಲೆಯ ಆವರಣದಲ್ಲಿ ನಡೆಸಿ ಪಾರದರ್ಶಕವಾಗಿ ತೀರ್ಪು ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಮಂಗಳವಾರ ವ್ಯವಸ್ಥಿತವಾಗಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿ ಸುಸೂತ್ರವಾಗಿ ನಡೆಯಲು ಎರಡು ಶಾಲೆಗಳ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದರು.


ನಂತರ ವಿಜೇತರಾದ ಮೇಟಿಕುಪ್ಪೆ ಶಾಲೆಯ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ಬಹುಮಾನ ವಿತರಿಸಿದರು. ಮೇಟಿಕುಪ್ಪೆ ಗ್ರಾಮದ ಗುರುಸ್ವಾಮಿ, ಶಿವನಂಜಪ್ಪ, ಮಲ್ಲೇಶ, ಮಾದಪ್ಪ, ನಾಗನಾಯಕ, ಚನ್ನಬಸವಾಚಾರಿ, ಮಂಜುನಾಥ, ಬಸವಲಿಂಗ, ಮಾದೇವಸ್ವಾಮಿ, ಪ್ರಕಾಶ್, ಬಿಆರ್‌ಸಿ ಕೃಷ್ಣಯ್ಯ, ಶಿಕ್ಷಕರಾದ ನಂಜರಾಜು, ಗೋಪಾಲಯ್ಯ, ರಾಮಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net