ಕನ್ನಡಿಗರಿಗೆ ಸಾಂಸ್ಕೃತಿಕ ಎಚ್ಚರವಿರದಿದ್ದರೆ ಅನಾಹುತ

ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು.
HUN-NOV-8-3(MAHILA COLLEGE PROGRAMME)
Published on

ಹುಣಸೂರು: ಕನ್ನಡ ಭಾಷೆ ಮತ್ತು ಪರಂಪರೆಯ ರಕ್ಷಣೆಯಲ್ಲಿ ಕನ್ನಡಿಗರಿಗೆ ಸಾಂಸ್ಕೃತಿಕ ಎಚ್ಚರವಿರದಿದ್ದರೆ ಅನಾಹುತ ಖಂಡಿತ ಎಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.


ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಹಾಗೂ ಭವ್ಯ ಇತಿಹಾಸವಿದೆ. ಕನ್ನಡ ಭಾಷೆ ಕನ್ನಡಿಗರಿಗೆ ಮಾತ್ರವಲ್ಲ, ಇತರ ಭಾಷಿಕರಿಗೂ ಬೇಕಾದ ಭಾಷೆಯಾಗಿದೆ. ಕನ್ನಡದ ಅಸ್ಮಿತೆ ಕಾಪಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ನಮ್ಮ ಭಾಷಾ ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತ ನಿಶ್ಚಿತ ಎಂದು ಎಚ್ಚರಿಸಿದರು.
ಕನ್ನಡಿಗರಿರದ ಸ್ಥಳವಿಲ್ಲ: ಭಾರತದ ಅಸ್ಮಿತೆಯಾಗಿರುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಬರುವ ಪಾತ್ರಗಳಲ್ಲಿ ಕನ್ನಡಿಗರಿದ್ದಾರೆ. ಪ್ರಭು ಶ್ರೀರಾಮಚಂದ್ರನ ಗೆಲುವಿನಲ್ಲಿ ಕನ್ನಡಿಗ ಹನುಮಂತನ ಪಾತ್ರ ಬಹುಮುಖ್ಯ. ರಾಮ ತನ್ನ ಬಾಯಾರಿಕೆ ನೀಗಿಸಿಕೊಂಡ ಪಂಪಸರೋವರ ನಮ್ಮ ರಾಜ್ಯದ ತುಂಗಭದ್ರಾ ನದಿಯಾಗಿದೆ.

ಪರಶುರಾಮನ ತಾಯಿ ಎಲ್ಲಮ್ಮ ಸವದತ್ತಿಯವಳು. ಪಂಚಪಾಂಡವರಲ್ಲಿ ಮೊದಲ ಮೂವರ ತಾಯಿ ಕುಂತಿದೇವಿ ಕನ್ನಡಿಗಳು, ಕುಂತಲ ರಾಜ್ಯದ ಹೆಣ್ಣುಮಗಳು. ಕುಂತಲ ರಾಜ್ಯವೆಂದರೆ ಇಂದಿನ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಯನ್ನೊಳಗೊಂಡ ಪ್ರದೇಶ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜ್ಞಾನಪ್ರಕಾಶ್ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಬಿ.ಎಂ.ನಾಗರಾಜು, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪುಟ್ಟಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಟಿ.ಕೆ.ಬೋಪಯ್ಯ, ಡಾ.ನಂಜುಂಡಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net