ಕನ್ನಡ ಶಾಲೆ ಮುಚ್ಚುವ ಹುನ್ನಾರ

HUN-SEP-22-6(KALKADA GOVT SCHOOL)
ಹುಣಸೂರು ತಾಲೂಕು ಕಲ್ಕಡ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆ.
Published on

ಹುಣಸೂರು: ಶಿಥಿಲಾವಸ್ಥೆಯಲ್ಲಿರುವ ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ. ಪರಿಣಾಮ 64 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿದೀಗ ಕೇವಲ 10 ಮಕ್ಕಳಿದ್ದಾರೆ…!


ತಾಲೂಕಿನ ಹನಗೋಡು ಹೋಬಳಿ ಕರಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ-ವ್ಯಥೆ ಇದಾಗಿದೆ. ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿದೆ ಎಂದು ಶಾಲೆಯ ಬಾಗಿಲು ಮುಚ್ಚಲು ಹೊರಡುವ ಇಲಾಖೆ ಮತ್ತು ಸರ್ಕಾರಗಳು ಸಮೃದ್ಧವಾಗಿ ವಿದ್ಯಾರ್ಥಿಗಳಿದ್ದ ಈ ಶಾಲೆಯ ಬಾಗಿಲನ್ನು ಹಾಕಲು ಹುನ್ನಾರ ನಡೆಸಿದೆಯೇ ಎನ್ನುವ ಅನುಮಾನ ಕಲ್ಕಡ ಗ್ರಾಮಸ್ಥರನ್ನು ಕಾಡುತ್ತಿದೆ.


25 ವರ್ಷಗಳ ಶಾಲೆ: 25 ವರ್ಷಗಳ ಹಿಂದೆ ಕಪ್ಪುಹಲಗೆ ಯೋಜನೆಯಡಿ ಈ ಶಾಲೆ ನಿರ್ಮಾಣಗೊಂಡಿದೆ. 2020ರವರೆಗೆ ಈ ಶಾಲೆಯಲ್ಲಿ 64ಕ್ಕೂ ಹೆಚ್ದು ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದರು. 2-3 ಶಿಕ್ಷಕರು ವಿದ್ಯಾಭ್ಯಾಸ ನೀಡುತ್ತಿದ್ದರು. ಆದರೆ ದಿನಕಳೆದಂತೆ ಶಾಲೆಯ ಕಟ್ಟಡ ದುಸ್ಥಿತಿ ತಲುಪಿತು. ಕಟ್ಟಡದ ಛಾವಣಿಯ ಗಾರೆ ಇದ್ದಕ್ಕಿದ್ದಂತೆ ಬೀಳಲಾರಂಭಿಸಿತು. ಜೀವಭಯದಲ್ಲೇ ಕುಳಿತು ಪಾಠ ಕೇಳುವ ದುಸ್ಥಿತಿ ಬಂತು.


ಇತ್ತೀಚೆಗಷ್ಟೇ ನಿರ್ಮಾಣಗೊಂಡಿರುವ ಅಕ್ಷರದಾಸೋಹ ಕೊಠಡಿಯು ಪಾಳು ರೂಮಿನಂತಾಗಿದೆ. ಇದರಿಂದ ಅಡುಗೆಯನ್ನು ಬಯಲಿನಲ್ಲಿ ಮಾಡಿ ಮಕ್ಕಳಿಗೆ ಉಣಬಡಿಸುವ ಪರಿಸ್ಥಿತಿ ಎದುರಾಯಿತು. ಎರಡು ವರ್ಷಗಳಿಂದ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಕಟ್ಟಡದ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಶೌಚಗೃಹಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.


ರಂಗಮಂದಿರದಲ್ಲಿ ಪಾಠ: ಕಟ್ಟಡದ ದುಸ್ಥಿತಿಗೆ ಹೆದರಿದ ಶಿಕ್ಷಕರು ಕೂಡ ಮಕ್ಕಳನ್ನು ಶಾಲಾ ಆವರಣದಲ್ಲಿರುವ ರಂಗಮಂದಿರದ ವೇದಿಕೆಯಲ್ಲಿ ಕೂರಿಸಿಕೊಂಡು ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಿರುವುದರಿಂದ ಅಪಾಯವನ್ನು ಮೈಮೇಲೆ ತಂದುಕೊಳ್ಳುವುದು ಬೇಡವೆಂದು ರಂಗಮಂದಿರದ ವೇದಿಕೆಯೇ ತರಗತಿಯಾಗಿ ಮಾರ್ಪಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಭಾರಿ ಇಳಿಕೆಯಿಂದಾಗಿ ಇಲಾಖೆ ಮಿಕ್ಕ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿದೆ. ಬದಲಾಗಿ ಕರಣಕುಪ್ಪೆಯಿಂದ ಒಬ್ಬ ಶಿಕ್ಷಕರನ್ನು ನಿಯೋಜನೆಗೊಳಿಸಿದೆ.


ಖಾಸಗಿ ಶಾಲೆಗೆ ಮಕ್ಕಳು: ಕಲ್ಕಡ ಗ್ರಾಮದಲ್ಲಿ 110 ಕುಟುಂಬಗಳಿದ್ದು ಬಹುತೇಕ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತಮ್ಮ ಕುಲಕಸುಬಾದ ಮರಗೆಲಸವೇ ಇವರಿಗೆ ಜೀವನಾಧಾರ. ಜತೆಗೆ ಕೃಷಿಕರಾಗಿದ್ದಾರೆ. ಮನೆ ಬಾಗಿಲಿನಲ್ಲೇ ಇದ್ದ ಶಾಲೆ ಇದ್ದೂ ಇಲ್ಲದಂತಾದ ಪರಿಸ್ಥಿತಿಯಿಂದಾಗಿ 2 ಕಿ.ಮೀ. ದೂರದ ಕರಣಕುಪ್ಪೆ ಸರ್ಕಾರಿ ಶಾಲೆಗೆ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದಾರೆ. ಸ್ಥಿತಿವಂತರು ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟುಬರುತ್ತಿದ್ದರೆ, ಮತ್ತೆ ಕೆಲ ಬಡಮಕ್ಕಳು 2 ಕಿ.ಮೀ.ನಡೆದುಕೊಂಡೇ ಶಾಲೆಗೆ ಹೋಗುವ ಪರಿಸ್ಥಿತಿ ಇದೆ.

ಆಳುವವರ ಅಸಡ್ಡೆ : ತಮ್ಮೂರಿನ ಶಾಲೆಗೆ ಮರುಜೀವ ನೀಡಬೇಕೆಂದು ಗ್ರಾಮಸ್ಥರು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ಸಂಸದರು, ಶಾಸಕರು ಇಲಾಖೆ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹೀಗೆ ಎಲ್ಲರಿಗೂ ಮನವಿ ಸಲ್ಲಿಸುತ್ತಲೇ ಇದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ನೆನಪಿಸುತ್ತಲೇ ಇದ್ದಾರೆ. ಆದರೆ ಯಾರೊಬ್ಬರೂ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮೂರೆಂದರೆ ಜನಪ್ರತಿನಿಧಿಗಳಿಗೆ ಯಾಕೆ ಇಷ್ಟೊಂದು ತಾತ್ಸಾರ ಎಂದು ಅರ್ಥವಾಗುತ್ತಿಲ್ಲ. ಪಕ್ಕದ ವದ್ಲಿ ಮನುಗನಹಳ್ಳಿಯಲ್ಲಿ ಇಂತಹುದೇ ದುಸ್ಥಿತಿಯಲ್ಲಿದ್ದ ಶಾಲೆ ಇದೀಗ ಹೊಸ ಕಟ್ಟಡವನ್ನು ಹೊಂದಿದೆ. ನಮ್ಮೂರಿಗೆ ಮಾತ್ರ ಇಂತಹ ಅನ್ಯಾಯವೇಕೆ ಎಂದು ಗ್ರಾಮದ ಮುಖಂಡರಾದ ಚಲುವಾಚಾರಿ, ಕೃಷ್ಣಾಚಾರಿ, ಶಿವರಾಮಾಚಾರಿ, ಈಶ್ವರಾಚಾರಿ ಮುಂತಾದವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಿರ್ಲಕ್ಷ್ಯವೇ ಕಾರಣ
60-70 ಮಕ್ಕಳು ಓದುತ್ತಿದ್ದ ನಮ್ಮೂರ ಶಾಲೆ ಇಂದು ಪಾಳು ಕಟ್ಟಡವಾಗಿದೆ. ಶಿಕ್ಷಣ ಇಲಾಖೆ ಶಾಲೆಯ ದುರಸ್ತಿಗೆಂದು ನೆಪವೊಡ್ಡಿ ತೇಪೆ ಹಚ್ಚುವ ಕಾರ್ಯ ಮಾಡಬಾರದು. ಇಡೀ ಕಟ್ಟಡ ನೆಲಸಮಗೊಳಿಸಿ ಹೊಸಕಟ್ಟಡವೇ ನಿರ್ಮಾಣಗೊಳ್ಳಬೇಕು. ಅಧಿಕಾರದಲ್ಲಿರುವವರ ನಿರ್ಲಕ್ಷ್ಯವೇ ನಮ್ಮ ಶಾಲೆಯ ದುಸ್ಥಿತಿಗೆ ಕಾರಣ. ಶೀಘ್ರ ನೂತನ ಕಟ್ಟಡ ನಿರ್ಮಾಣ ಮಾಡಬೇಕು. ಮತ್ತೆ ಶಾಲೆಗೆ ಮಕ್ಕಳನ್ನು ಕಳುಹಿಸುವ ಜವಾಬ್ದಾರಿ ನಮ್ಮದು.
ಕೃಷ್ಣಾಚಾರಿ

ಅಧ್ಯಕ್ಷ, ವಿಶ್ವಕರ್ಮ ಸಮಾಜ, ಕಲ್ಕಡ ಗ್ರಾಮ

ಆದ್ಯತೆ ಮೇಲೆ ಕ್ರಮವಹಿಸಲಾಗುವುದು
ಮಳೆಹಾನಿ ಪರಿಹಾರದಡಿ ಅನುದಾನ ಮೀಸಲಿದ್ದು, ತಾತ್ಕಾಲಿಕವಾಗಿ ದುರಸ್ತಿ ಕ್ರಮ ಜರುಗಿಸಲಾಗುವುದು. ಆದರೆ ಶಾಲೆಯ ಕಟ್ಟಡ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಆದಷ್ಟು ಶೀಘ್ರವೇ ನೂತನ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.

ಎಸ್.ರೇವಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ, ಹುಣಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net