ಕನ್ನಡ ಕಡ್ಡಾಯ, ಬಲವಂತದ ಕ್ರಮ ಬೇಡ: ರಾಜ್ಯ ಸರ್ಕಾರ, ವಿವಿಗಳಿಗೆ ಹೈಕೋರ್ಟ್ ನಿರ್ದೇಶನ; ಡಿ.16ಕ್ಕೆ ವಿಚಾರಣೆ ಮುಂದೂಡಿಕೆ

High curt 14 May 20
Published on

ಬೆಂಗಳೂರು: ಪದವಿ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಆದೇಶದ ಅನುಸಾರ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಸರ್ಕಾರದ ಆದೇಶ ರದ್ದು ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿಯನ್ನು ನ.15ರಂದು ವಿಚಾರಣೆ ನಡೆಸಿದ್ದ ಪೀಠ, ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಕೇಳಿತ್ತಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಜಾರಿಗಾಗಿ ಭಾಷೆ ಕಲಿಕೆ ಕಡ್ಡಾಯಗೊಳಿಸಬಹುದೇ? ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚಿಸಿತ್ತು. ಸೋಮವಾರ ವಿಚಾರಣೆಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್​ಜಿ) ಎಂ.ಬಿ. ನರಗುಂದ್, ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಲು ಕೊಂಚ ಕಾಲಾವಕಾಶ ನೀಡುವಂತೆ ಕೋರಿದರು.

ಮತ್ತೊಂದೆಡೆ, ವಿವಿಧ ಕೋರ್ಸ್​ಗಳ ಪ್ರವೇಶಾತಿ ಅಂತಿಮಗೊಳಿಸಲು ವಿದ್ಯಾರ್ಥಿಗಳ ದಾಖಲಾತಿ ಪತ್ರಗಳನ್ನು ಕಳುಹಿಸುವಂತೆ ವಿವಿಗಳು ಕಾಲೇಜುಗಳಿಗೆ ಸೂಚಿಸುತ್ತಿವೆ. ಆದ್ದರಿಂದ, ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಸಂಸ್ಕೃತ ಭಾರತಿ ಟ್ರಸ್ಟ್ ಮತ್ತಿತರ ಪರ ಹಿರಿಯ ವಕೀಲ ಎಸ್.ಎಸ್. ನಾಗಾನಂದ್ ದನಿಗೂಡಿಸಿ, ಕನ್ನಡವಲ್ಲದೆ ಇತರ ಭಾಷೆ ಆಯ್ದುಕೊಂಡಿರುವ ವಿದ್ಯಾರ್ಥಿಗಳ ದಾಖಲಾತಿ ಪತ್ರಗಳನ್ನು ಕಾಲೇಜುಗಳು ವಿಶ್ವವಿದ್ಯಾಲಯಗಳಿಗೆ ಕಳುಹಿಸಿಕೊಡದೆ ತಡೆ ಹಿಡಿಯುತ್ತಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ಪೀಠ, ಕೇಂದ್ರದಿಂದ ಮಾಹಿತಿ ಪಡೆದು ತಿಳಿಸಲು ಎಎಸ್​ಜಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

ವಿದ್ಯಾರ್ಥಿಗಳಿಂದ ಹೈಕೋರ್ಟ್​ಗೆ ಅರ್ಜಿ: ಸರ್ಕಾರದ ಆದೇಶ ರದ್ದುಕೋರಿ ಅರ್ಜಿ ಸಲ್ಲಿಸಿರುವ ಬಸವನಗುಡಿ ವಿಜಯಾ ಕಾಲೇಜಿನ 6 ಪದವಿ ವಿದ್ಯಾರ್ಥಿಗಳ ಪರವಾಗಿ ಹಾಜರಿದ್ದ ವಕೀಲ ಶ್ರೀಧರ್ ಪ್ರಭು, ಕನ್ನಡ ಕಡ್ಡಾಯ ಆದೇಶ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ, ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು. ಮೊದಲ ವರ್ಷ ಪದವಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸಂಸ್ಕೃತ ಹಾಗೂ ಆಂಗ್ಲ ಭಾಷೆ ಆಯ್ದುಕೊಳ್ಳಲು ಬಯಸಿದ್ದಾರೆ. ಆದರೆ, ಸರ್ಕಾರದ ಆದೇಶದ ಪ್ರಕಾರ ಕನ್ನಡವನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net