

ಆಲ್ದೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಾಣಿಜ್ಯ ಮಳಿಗೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಆರ್ಥಿಕ ನೆರವು ನೀಡಿ ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿವೆ ಎಂದರು.
ಯಾವ ಕ್ಷೇತ್ರದಲ್ಲಾದರೂ ಎಲ್ಲರೂ ಒಗ್ಗೂಡಿ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ. ಸಹಕಾರ ಸಂಘದ ಬೆಳವಣಿಗೆಗೆ ಹಿಂದಿನ ನಿರ್ದೇಶಕರ ಕೊಡುಗೆ ಇದೆ. ಎಲ್ಲರ ಸಹಕಾರ, ಪರಿಶ್ರಮ, ಸಿಬ್ಬಂದಿಯ ಪ್ರಾಮಾಣಿಕ ಕರ್ತವ್ಯದಿಂದ ಮಾತ್ರ ಸಂಘ ಸಂಸ್ಥೆಗಳು ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಸಹಕಾರಿ ಕ್ಷೇತ್ರಗಳು ಉದ್ದಿಮೆಯಾಗಿ ಬೆಳೆದಿವೆ. ದೇಶದ ಆರ್ಥಿಕತೆಯಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖ. ಆಲ್ದೂರಿನ ಈ ಸಂಘ ಉತ್ತಮವಾಗಿ ಪ್ರಗತಿ ಹೊಂದಲಿ ಎಂದು ಹಾರೈಸಿದರು.
ಸಂಘದ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ದಾನಿಗಳು, ವಿವಿಧ ಸಹಕಾರ ಸಂಘಗಳ ಸಿಇಒಗಳನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸಂದೇಶ್, ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ, ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಸಂಘದ ಉಪಾಧ್ಯಕ್ಷ ಡಿ.ಎನ್.ನಟೇಶ್, ನಿರ್ದೇಶಕರಾದ ಎಚ್.ಎಸ್.ಕವೀಶ್, ಎಚ್.ಪಿ.ನಾರಾಯಣ ಗೌಡ, ಡಿ.ಆರ್.ದಿಲೀಪ್‌ಕುಮಾರ್, ಎಚ್.ಎ.ನಾರಾಯಣ, ಡಿ.ಎಂ.ವಿನೋದಾ, ಡಿ.ಎಸ್.ರೇಖಾ ಈರೇಗೌಡ, ಕೆ.ಆರ್.ಪರಮೇಶ್, ಎಚ್.ಕೆ.ಪಾಯಣ್ಣ, ದೇವರಾಜ್, ಚನ್ನಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೆ.ಆರ್.ರಘು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಟಿ.ವೆಂಕಟೇಶ್ ಗೌಡ , ಗ್ರಾಪಂ ಉಪಾಧ್ಯಕ್ಷ ಡಿ.ಬಿ.ಅಶೋಕ್, ಮೇಘನಾ ಇದ್ದರು.