

ಬಸವಕಲ್ಯಾಣ: ಸಮಾಜದಲ್ಲಿ ಒಗ್ಗಟ್ಟು ಸಾಧಿಸದ ಹೊರತು ಪ್ರಗತಿ ಆಗದು. ಸಂಘಟಿರಾದಾಗ ಮಾತ್ರ ರಾಜಕೀಯದಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯ. ಹೀಗಾಗಿ ಸಮಾಜದ ಜನರು ಸಂಘಟಿತರಾಗಬೇಕು ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ನುಡಿದರು.
ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಸದ್ಗುರು ಶ್ರೀ ಮೌನೇಶ್ವರ ೧೫ನೇ ವರ್ಷದ ಜಾತ್ರೋತ್ಸವ ನಿಮಿತ್ತ ಶನಿವಾರ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಾತ್ರೆ ನೆಪದಲ್ಲಿ ಸಮಾಜದ ಎಲ್ಲರೂ ಒಂದು ಕಡೆ ಸೇರಿದ್ದು ಸಂತಸ ತಂದಿದೆ. ಸಮಾಜ ಕಟ್ಟಲು ಬಂದಿರುವ ಶ್ರೀನಿವಾಸ ಮಹಾಸ್ವಾಮೀಜಿಗಳು ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಭೇದವನ್ನು ಅಳಿಸಿ ಹಾಕಿ ಎಲ್ಲರೂ ಒಂದು ಎನ್ನುವ ಐಕ್ಯತೆಯ ಸಂದೇಶ ಕೊಟ್ಟ ಮಹಾ ಮಾನವತಾವಾದಿ ಜಗದ್ಗುರು ಮೌನೇಶ್ವರರು. ಬಸವೇಶ್ವರರ ತತ್ವ ಹಾಗೂ ಮೌನೇಶ್ವರರ ತತ್ವ ಒಂದೇ ಆಗಿದೆ. ಅವರು ಬದುಕಿನ ಮಾರ್ಗ ಹಾಗೂ ತೋರಿದ ಮಾರ್ಗದ ಎಲ್ಲರೂ ನಡೆಯಬೇಕಿದೆ ಎಂದರು.
ಮಾಜಿ ಎಂಎಲ್ಸಿ ವಿಜಯಸಿಂಗ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಉದ್ಯಮಿ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ವಿಶ್ವಕರ್ಮ ಏಕದಂಡಗಿ ಮಠ ಯಾದಗಿರಿ, ಕಲಬುರಗಿಯ ಪೀಠಾಧೀಶ ಶ್ರೀ ಶ್ರೀನಿವಾಸ ಮಹಾಸ್ವಾಮೀಜಿ, ಸಸ್ತಾಪುರದ ಶ್ರೀ ಸದಾನಂದ ಅಪ್ಪಗಳು, ಗವಿಮಠ ಸಂಸ್ಥಾನದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಖೇರ್ಡಾ(ಬಿ) ಶಿವಲಿಂಗೇಶ್ವರ ವಿರಕ್ತಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಕೆಎನ್‌ಎನ್‌ಎಲ್ ಮಾಜಿ ಎಂಡಿ ಮಲ್ಲಿಕಾರ್ಜುನ ಗುಂಗೆ, ನಗರಸಭೆ ಸದಸ್ಯ ನಿರ್ಮಲಾ ಶಿವಣಕರ ಮಾತನಾಡಿದರು. ಬಸವಕಲ್ಯಾಣ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈರಣ್ಣ ಎಸ್.ಪಂಚಾಳ ಅಧ್ಯಕ್ಷತೆ ವಹಿಸಿದ್ದರು. ಬೀದರ್‌ನ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಹೇಶ ಪಂಚಾಳ ಇತರರಿದ್ದರು. ವೈಜಿನಾಥ ಪಂಚಾಳ ಸ್ವಾಗತಿಸಿದರು. ರವಿಕುಮಾರ ಪಂಚಾಳ ನಿರೂಪಣೆ ಮಾಡಿದರು.