

ಕಡೂರು: ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿರುವ 17 ಗ್ರಾಮ ಪಂಚಾಯಿತಿಗಳ ನೂತನ ಕಟ್ಟಡಗಳ ಕಾಮಗಾರಿಯು ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಚಿಕ್ಕಂಗಳ ಗ್ರಾಮದಲ್ಲಿ ಭಾನುವಾರ ಗ್ರಾಪಂನ ಸುಮಾರು 45 ಲಕ್ಷ ರೂ.ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಹಾಗೂ ಅಂಗನವಾಡಿ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಬಹುತೇಕ ಪಂಚಾಯಿತಿಗಳಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಪಂಚಾಯಿತಿ ಆಡಳಿತ ಮಂಡಳಿ ಒತ್ತು ನೀಡಿದೆ. ನರೇಗಾ ಅನುದಾನ ಮತ್ತು ಸರ್ಕಾರದ ವಿವಿಧ ಹಂತದ ಅನುದಾನ ಬಳಸಿಕೊಂಡು 4 ಪಂಚಾಯಿತಿಗಳು ಉದ್ಘಾಟನೆಗೊಂಡಿವೆ. 2025ರೊಳಗೆ ಚಿಕ್ಕಂಗಳ ಗ್ರಾಪಂ ಒಳಗೊಂಡು ನಿರ್ಮಾಣ ಹಂತದಲ್ಲಿರುವ 17 ಪಂಚಾಯಿತಿಗಳು ನೂತನ ಕಟ್ಟಡವಾಗಿ ಉದ್ಘಾಟನೆಗೊಳ್ಳಲಿವೆ ಎಂದರು.
ಅಂಗನವಾಡಿ ಕಟ್ಟಡಗಳು ಗುಣಮಟ್ಟದ ಕಾಮಗಾರಿ ಕಾಯ್ದುಕೊಂಡು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಮಕ್ಕಳ ಆಕರ್ಷಣೆಯ ಕೇಂದ್ರವಾಗಿ ಬಿಂಬಿತವಾಗುತ್ತಿವೆ. ತಲಾ 20 ಲಕ್ಷ ರೂ. ವೆಚ್ಚದಲ್ಲಿ 16 ಅಂಗನವಾಡಿ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ 30 ಅಂಗನವಾಡಿಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಚಿಕ್ಕಂಗಳ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಇದುವರೆಗೂ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅನುದಾನ ನೀಡಲಾಗಿದೆ. ಗ್ರಾಮದ ಕೆರೆ ಏರಿ ಅಭಿವೃದ್ಧಿ ಹಾಗೂ ಕಾಲುವೆ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಚಿಕ್ಕಂಗಳ ಗ್ರಾಪಂ ಅಧ್ಯಕ್ಷ ಎಂ.ಪ್ರಕಾಶ್‌ನಾಯ್ಕ ಮಾತನಾಡಿ, ಪಂಚಾಯಿತಿ ಎಲ್ಲ ಸದಸ್ಯರ ಸಹಕಾರದೊಂದಿಗೆ ನರೇಗಾ ಅನುದಾನದಡಿ 20 ಲಕ್ಷ ರೂ. ಹಾಗೂ ಸರ್ಕಾರದ ವಿಶೇಷ ಅನುದಾನದಲ್ಲಿ 25 ಲಕ್ಷ ರೂ. ಅನುದಾನ ಬಳಸಿಕೊಂಡು ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿದೆ. ಗ್ರಾಮದ ಕೆರೆಯ ಏರಿ ದುರಸ್ತಿ ಸೇರಿದಂತೆ ಸ್ಮಶಾನಕ್ಕೆ ಸೂಕ್ತ ಜಾಗದ ವ್ಯವಸ್ಥೆ, ಮುಖ್ಯಕಾಲುವೆ ದುರಸ್ತಿ ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ಅನುದಾನವನ್ನು ಶಾಸಕರು ಒದಗಿಸುವಂತೆ ಮನವಿ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ಜಯಾಬಾಯಿ, ಸದಸ್ಯರಾದ ಲತಾ, ಮಂಜುಳಾಬಾಯಿ, ಎ.ಸಿ.ಷಡಾಕ್ಷರಿ, ಸಿ.ಜಿ.ಪ್ರಕಾಶ್, ಕೆ.ಸುನೀತಾ, ನರೇಗಾ ಸಹಾಯಕ ನಿರ್ದೇಶಕ ಕಲ್ಲಪ್ಪ, ಸಿಡಿಪಿಒ ಶಿವಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಹರಿರಾಮ್, ಅಂಗನವಾಡಿ ಕಾರ್ಯಕರ್ತೆರು ಹಾಗೂ ಗ್ರಾಮಸ್ಥರು ಇದ್ದರು.