ಐಎಎಸ್ ಅಧಿಕಾರಿಗಳು ದೇಶದ ಸಂಸ್ಕೃತಿ ತಿಳಿಯಲಿ

3sirsi2
Published on

ಶಿರಸಿ: ಆಡಳಿತಕ್ಕೆ ಪೂರಕವಾಗಿರುವ ಎಲ್ಲ ಅಂಶಗಳು ಈ ನೆಲದ ಸಂಸ್ಕೃತಿಯಲ್ಲಿವೆ. ಐಎಎಸ್ ಅಧಿಕಾರಿಗಳು ನಮ್ಮ ಸಂಸ್ಕೃತಿಯನ್ನು ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಯೋಗಮಂದಿರದಲ್ಲಿ ಆನ್​ಲೈನ್ ಮೂಲಕ ಏರ್ಪಡಿಸಿದ್ದ ಐಎಎಸ್ ಸ್ವರ್ಧಾತ್ಮಕ ಪರೀಕ್ಷೆಗಳ ಆನ್​ಲೈನ್ ತರಬೇತಿ ತರಗತಿಗೆ ಮಂಗಳವಾರ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವು ಸದೃಢ ಅಧಿಕಾರಿಗಳಿಂದ ಮಾತ್ರ ಸಾಧ್ಯ. ನಮ್ಮ ದೇಶದ ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಬೇಕಾದಲ್ಲಿ ಮನಸ್ಮತಿ, ಯಾಜ್ಞವಲ್ಕ್ಯ ಸ್ಮೃತಿ ನೋಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳು ನಮ್ಮ ಸಂಸ್ಕೃತಿಯನ್ನು ತಿಳಿಯಬೇಕು. ಅದು ಆಡಳಿತಕ್ಕೆ ಪೂರಕವಾಗುತ್ತದೆ. ಕಾನೂನಿನ ಪರಿಮಿತಿಯಲ್ಲಿ ಈ ವ್ಯವಸ್ಥೆ ಉಳಿಸಿಕೊಳ್ಳುವ ಜವಾಬ್ದಾರಿ ಇರುವುದರಿಂದ ಎಲ್ಲ ವಿಷಯದಲ್ಲಿ ತಿಳಿವಳಿಕೆ ಇರುವುದು ಅಗತ್ಯ ಎಂದರು.

ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಸಿ.ವಿ. ಗೋಪಿನಾಥ್ ಅವರು, ನಾಗರಿಕ ಸೇವಾ ಅಧಿಕಾರಿಗಳಲ್ಲಿ ಇರಬೇಕಾದ ನಿಷ್ಠೆ, ಮಾನವೀಯ ಸೇವಾ ಮನೋಭಾವ ಹಾಗೂ ಕಾನೂನಿನ ರಕ್ಷಣೆ ಮಾಡುವ ಜವಾಬ್ದಾರಿ ಮತ್ತು ಧೈರ್ಯ ಕುರಿತು ಉಪನ್ಯಾಸ ನೀಡಿದರು.

ಕೇಂದ್ರ ಸರ್ಕಾರದ ಯುಪಿಎಸ್​ಸಿ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ ವೆಂಕಟ್ರಮಣ ಕವಡಿಕೆರೆ ಹಾಗೂ ಸುದರ್ಶನ ಭಟ್ಟ ಅವರು ಸ್ವಯಂನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನಡೆಸಿಕೊಟ್ಟರು. ಸ್ವಯಂನ ಕಾರ್ಯಾಧ್ಯಕ್ಷ ಎಸ್.ಎಂ. ಹೆಗಡೆ ಗೌರಿಬಣ್ಣಿಗೆ, ಪ್ರಮುಖರಾದ ಎಂ.ಆರ್. ಹೆಗಡೆ ಗೊಡ್ವೆಮನೆ, ವಿ.ವಿ. ಭಟ್ಟ, ಅನೀಶ ಹೆಗಡೆ, ಶ್ರೀಕಾಂತ ಹೆಗಡೆ, ಅರವಿಂದ ಹೆಗಡೆ ಬೊಪ್ಪನಳ್ಳಿ, ರಮೇಶ ಭಟ್ಟ ವಾನಳ್ಳಿ ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net