ಎರಡೇ ತಾಸಿನಲ್ಲಿ ಅಂಗವಿಕಲರ ಸಹಾಯವಾಣಿ ಕೇಂದ್ರಕ್ಕೆ ಹೊಸ ರೂಪ

1 smg 14
Published on

ಶಿವಮೊಗ್ಗ: ಗಿಡಗಂಟಿ ಬೆಳೆದು, ಮದ್ಯದ ಬಾಟಲಿಗಳು ಹಾಗೂ ತ್ಯಾಜ್ಯದಿಂದ ತುಂಬಿ ಕೊಂಪೆಯಂತಿದ್ದ ಎಪಿಎಂಸಿ ಎದುರಿನ ಸರ್ಕಾರಿ ಅಂಗವಿಕಲರ ಸಹಾಯವಾಣಿ ಕೇಂದ್ರದ ಆವರಣವನ್ನು ಭಾನುವಾರ 100ಕ್ಕೂ ಅಧಿಕ ಸ್ವಯಂಸೇವಕರ ತಂಡ ಎರಡೇ ತಾಸಿನಲ್ಲಿ ಸ್ವಚ್ಛ ಮಾಡುವ ಮೂಲಕ ಆವರಣಕ್ಕೆ ಹೊಸ ರೂಪ ನೀಡಿತು.

ಬಿ.ಎಚ್.ರಸ್ತೆಯ ರೇಷ್ಮೆ ಇಲಾಖೆಗೆ ಕಟ್ಟಡದಲ್ಲಿ ಅಂಗವಿಕಲರ ಸಹಾಯವಾಣಿ ಕೇಂದ್ರದ ಆವರಣಕ್ಕೆ ಸ್ವಚ್ಛತೆಯ ಕಾಯಕಲ್ಪದ ಅಗತ್ಯವಿದೆ ಎಂದು ಅಂಗವಿಕಲರು ಪರಿಸರಾಸಕ್ತ ಸಂಘಟನೆಗಳಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಜಿ ಫೌಂಡೇಷನ್, ಪರೋಪಕಾರಂ ಸಂಘ, ಶಿವಮೊಗ್ಗ ರೌಂಡ್ ಟೇಬಲ್ ಹಾಗೂ ಸಕ್ಷಮ ಸಂಘಟನೆಗಳ ಸದಸ್ಯರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಮದ್ಯದ ಬಾಟಲಿಗಳು, ಆಟೋ ವರ್ಕ್‌ಶಾಪ್‌ಗಳ ಘನತ್ಯಾಜ್ಯ, ಸುತ್ತಮುತ್ತ ಜನರು ತಂದು ಸುರಿಯುತ್ತಿದ್ದ ಪ್ಲಾಸ್ಟಿಕ್‌ನಿಂದ ದುರ್ನಾತ ಬೀರುತ್ತಿತ್ತು. ಅಲ್ಲದೇ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಕಸ, ಶೌಚಗೃಹಕ್ಕೆ ಹೋಗುವ ದಾರಿಯನ್ನು ಸ್ವಚ್ಛಗೊಳಿಸುವ ಮೂಲಕ ಕಚೇರಿಯನ್ನು ಕಳೆಗಟ್ಟುವಂತೆ ಮಾಡಿದರು.

ಶ್ರಮಾಧಾನದ ಬಳಿಕ ಮಾತನಾಡಿದ ಡಾ. ಧನಂಜಯ ಸರ್ಜಿ, ಸ್ಮಾರ್ಟ್‌ಸಿಟಿ ಹಿನ್ನೆಲೆ ನಗರದಲ್ಲಿ ಒಂದಷ್ಟು ಕಾಮಗಾರಿಗಳು ಭರದಿಂದ ಸಾಗಿದೆ. ಇದಕ್ಕೆ ಪೂರಕವಾಗಿ ನಾವು ಪರಿಸರ ಸ್ವಚ್ಛತೆ ಕಾಪಾಡಬೇಕಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಸುರಿಯದೆ ಅಳವಡಿಸಿರುವ ಮೆಶ್‌ಗಳಲ್ಲಿ ಹಾಕುವಂತೆ ಮನವಿ ಮಾಡಿದರು.

ಪರೋಪಕಾರಂ ತಂಡದ ಸದಸ್ಯ ತ್ಯಾಗರಾಜ್ ಮಿತ್ಯಾಂತ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ನಮ್ಮ ತಂಡ 580ಕ್ಕೂ ಅಧಿಕ ಸ್ವಚ್ಛತಾ ಕಾರ್ಯ ಮಾಡಿದೆ ಎಂದರು. ಪರೋಪಕಾರಂ ಶ್ರೀಧರ್, ಸಕ್ಷಮ ಸಂಸ್ಥೆಯ ಶಿವಕುಮಾರ್, ಪಾಲಿಕೆ ಸಿಬ್ಬಂದಿ, ಆಯನೂರಿನ ಅಂಗವಿಕಲರು, ಸ್ವಯಂಸೇವಕರು ಭಾಗವಹಿಸಿದ್ದರು. ತ್ಯಾಜ್ಯ ಹಾಕಲು ಎರಡು ಮೆಶ್ ಅಳವಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net