ಎಚ್.ಡಿ.ಕೋಟೆಯಲ್ಲಿ ಲಾಠಿ ಪ್ರಹಾರ

17HDK3 (1)
Published on

ಎಚ್.ಡಿ.ಕೋಟೆ: ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಣ ಮಾಡಲು ಲಾಠಿ ಬೀಸಿದರು.


ಕಾಂಗ್ರೆಸ್ ಅಭ್ಯರ್ಥಿ ಶಾಸಕ ಅನಿಲ್ ಚಿಕ್ಕಮಾದು ನಾಮಪತ್ರ ಸಲ್ಲಿಸಲು 11 ಗಂಟೆಗೆ ಸಮಯ ನಿಗದಿ ಮಾಡಿಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ 12 ಗಂಟೆಗೆ ಸಮಯ ನಿಗದಿ ಮಾಡಿಕೊಂಡಿದ್ದರು. ಆದರೆ, ಅನಿಲ್ ಚಿಕ್ಕಮಾದು ಪಟ್ಟಣದ ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಸಾವಿರಾರು ಕಾರ್ಯಕರ್ತರು, ಮುಖಂಡರ ಜತೆ ತೆರೆದ ವಾಹನದಲ್ಲಿ ಮಧ್ಯಾಹ್ನ 1 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಿ ತಾಲೂಕು ಆಡಳಿತ ಸೌಧದ ಮುಂಭಾಗ 2.25ಕ್ಕೆ ತಲುಪಿದರು.


ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಚಾಮುಂಡೇಶ್ವರಿ ದೇವಸ್ಥಾನದಿಂದ ಬೆಂಬಲಿಗರ ಜತೆ ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದ ಬಾಪೂಜಿ ವೃತ್ತ ತಲುಪಿದಾಗ ಮೇಟಿಕುಪ್ಪೆ ರಸ್ತೆಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪೊಲೀಸ್ ಸ್ಟೇಷನ್ ರಸ್ತೆ ಕಡೆಯಿಂದ ಜೆಡಿಎಸ್ ಕಾರ್ಯಕರ್ತರು ಬಂದು ಒಂದೇ ಕಡೆ ಸೇರಿದರು. ಈ ಸಂದರ್ಭ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಹಿಂದೆ ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ಸಾಗಲು ಅವಕಾಶ ನೀಡಿದರು.


ತಾಲೂಕು ಆಡಳಿತಸೌಧದ ಮುಂಭಾಗಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅವರು ತೆರೆದ ವಾಹನದಿಂದ ಕೆಳಗೆ ಇಳಿಯುವುದು ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಅವರನ್ನು ಹೊತ್ತುಕೊಂಡು ತಾಲೂಕು ಆಡಳಿತಸೌಧದ ಗೇಟ್ ಹತ್ತಿರ ಕರೆತಂದರು. ಈ ವೇಳೆ ತಮ್ಮ ತಮ್ಮ ಪಕ್ಷದ ಪರವಾಗಿ ಕಾರ್ಯಕರ್ತರು ಜಯಘೋಷ ಕೂಗಿದರು. ಈ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು. ತಕ್ಷಣ ಎಚ್ಚೆತ್ತ ಪೊಲೀಸರು ಹಾಗೂ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಲಾಠಿ ಬೀಸಿ ಎಲ್ಲರನ್ನೂ ಚದುರಿಸಿದರು. ಈ ವೇಳೆ ಹಲವರು ಲಾಠಿ ರುಚಿ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net