

ತರೀಕೆರೆ: ಗ್ರಾಮಸ್ಥರು ಹಾಗೂ ಶಾಲಾ, ಕಾಲೇಜು ಮಕ್ಕಳ ಬಹುದಿನಗಳ ಬೇಡಿಕೆಯಂತೆ ಎಂ.ಸಿ.ಹಳ್ಳಿಯಲ್ಲಿ ವೇಗದೂತ ಬಸ್‌ನ ನಿಲುಗಡೆ ಮಾಡಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿಯ ಎಲ್ಲ ವೇಗದೂತ ಬಸ್‌ಗಳ ನಿಲುಗಡೆ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ತರೀಕೆರೆ ಹಾಗೂ ಭದ್ರಾವತಿ ನಡುವಿನ ಎಂ.ಸಿ.ಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ದಿನೇದಿನೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಬೇರೆ ಬೇರೆ ಕಡೆ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳ ಸಂಖ್ಯೆಯೂ ಅಧಿಕವಾಗುತ್ತಿದೆ. ಬೆರಳೆಣಿಕೆಯಷ್ಟು ಗ್ರಾಮೀಣ ಸಾರಿಗೆ ಬಸ್‌ಗಳು ಸಂಚರಿಸುತ್ತಿರುವುದರಿಂದ ಜನಸಾಮಾನ್ಯರ ಜತೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರಯಾಣ ಬೆಳೆಸಲು ಅನಾನುಕೂಲವಾಗುತ್ತಿದೆ. ಈ ಸಮಸ್ಯೆ ಅರಿತು ರಾಜಹಂಸ, ಐರಾವತ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿಯ ಎಲ್ಲ ವೇಗದೂತ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಯರೇಬೈಲಿನಿಂದ ಎಂ.ಸಿ.ಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 1.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನಿಂದ ಎಂ.ಸಿ.ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಮಾತನಾಡಿ, 30 ವರ್ಷಗಳ ಹೋರಾಟಕ್ಕೆ ಇದೀಗ ಲ ಸಿಕ್ಕಿದೆ. ನಿಯಮಿತ ಬಸ್ ಸಂಚಾರದಿಂದ ಕತ್ತಲಾದರೆ ತರೀಕೆರೆ ಮತ್ತು ಭದ್ರಾವತಿ ಕಡೆಯಿಂದ ಎಂ.ಸಿ.ಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಬರಬೇಕಿದ್ದ ಜನರ ಪರದಾಟ ತಪ್ಪಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಲುಮೇಲು, ಸದಸ್ಯರಾದ ರಂಗಸ್ವಾಮಿ, ಎಚ್.ಟಿ.ಪ್ರದೀಪ್, ಜ್ಯೋತಿ, ಪ್ರೇಮಲತಾ, ಭದ್ರಗಿರಿ ದೇಗುಲದ ಶ್ರೀ ಮುರುಗೇಶ್ ಸ್ವಾಮೀಜಿ, ತಾಪಂ ಮಾಜಿ ಸದಸ್ಯ ಕೆಂಪೇಗೌಡ, ಕೆಎಸ್‌ಆರ್‌ಟಿಸಿ ಭದ್ರಾವತಿ ಡಿಪೋ ಮ್ಯಾನೇಜರ್ ವಿಠ್ಠಲ್, ಕಡೂರು ಡಿಪೋ ಮ್ಯಾನೇಜರ್ ಗಿರೀಶ್, ಗ್ರಾಮಸ್ಥರಾದ ಈ.ಧನಂಜಯ, ಎಂ.ಈ.ಪ್ರಮೋದ್‌ಕುಮಾರ್, ಪ್ರಶಾಂತ್, ಎಂ.ಎಚ್.ರಾಮಚಂದ್ರ, ಮಧು, ಏಳುಮಲೈ, ದಯಾನಂದ್ ಮತ್ತಿತರರಿದ್ದರು.