ಈ ಬಾರಿ ಬಿಜೆಪಿ ಅಭ್ಯರ್ಥಿ ಆಯ್ಕೆ

IMG20230503124744
Published on

ಬೈಲಕುಪ್ಪೆ: ತಾಲೂಕನ್ನು ಹಲವು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಒಬ್ಬರನ್ನೊಬ್ಬರು ದೂರಿಕೊಂಡು ರಾಜಕೀಯ ಮಾಡುತ್ತಾ ಕಾಲಹರಣ ಮಾಡಿದರೇ ಹೊರತು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಿಲ್ಲ. ಅದನ್ನೆಲ್ಲ ಗಮನಿಸುತ್ತಿರುವ ತಾಲೂಕಿನ ಜನತೆ ಬಿಜೆಪಿ ಅಭ್ಯರ್ಥಿಯ ಆಯ್ಕೆಗೆ ಮನಸ್ಸು ಮಾಡಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.


ಪಿರಿಯಾಪಟ್ಟಣ ತಾಲೂಕಿನ ಕೊಪ್ಪ, ಹಾರನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಪರ ಬುಧವಾರ ಮತಯಾಚನೆ ನಡೆಸಿ ಮಾತನಾಡಿದರು.


ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಾಲಿಬಾನ್ ರೀತಿಯ ಸರ್ಕಾರ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ರದ್ದು ಮಾಡಿದ್ದ ಬಿಜೆಪಿ ಸರ್ಕಾರದ ಆದೇಶವನ್ನು ರದ್ದುಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಮೂಲಕ ಸಂವಿಧಾನ ಉಲ್ಲಂಘನೆಯ ಕೆಲಸಕ್ಕೆ ಕಾಂಗ್ರೆಸ್ ಒತ್ತು ನೀಡುತ್ತಿದೆ. ಆದ್ದರಿಂದ ಜನತೆ ಜಾಗ್ರತೆ ಹೊಂದಬೇಕು ಎಂದರು.


ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲದೆ ಅವಕಾಶವಾದಿ ರಾಜಕಾರಣ ಮಾಡಿ ಆಡಳಿತ ನಡೆಸಲು ಹೊಂಚು ಹಾಕುತ್ತಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತಾಲೂಕಿನ ಜನತೆ ತಿರಸ್ಕರಿಸಿ ಉತ್ತಮ ಆಡಳಿತ ನೀಡಲು ಬಯಸಿರುವ ಬಿಜೆಪಿಗೆ ಬಹುಮತ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಳ್ವಿಕೆ ನಡೆಸಲು ಸಹಕರಿಸಬೇಕು ಎಂದರು.


ಕೇಂದ್ರ ಸರ್ಕಾರದಿಂದ ಜಲಜೀವನ್ ಮಿಷನ್ ಯೋಜನೆ ವತಿಯಿಂದ ತಾಲೂಕಿನ 303 ಗ್ರಾಮಗಳಿಗೆ ಶುದ್ಧ ಕುಡಿಯುವ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ತುಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಿ.ಎಚ್.ವಿಜಯ್ ಶಂಕರ್ ಅವರು ಕೂಡ ತಂಬಾಕು ರೈತರ ಸಮಸ್ಯೆ ಬಗೆಹರಿಸಲು ಸ್ಪಂದಿಸಿದ್ದಾರೆ. ಇದಲ್ಲದೆ, ರಾಜ್ಯದಲ್ಲಿ ಹೆದ್ದಾರಿಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುದಾನ ನೀಡಿದೆ ಮತ್ತು ಪಿರಿಯಾಪಟ್ಟಣದ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರಕ್ಕೂ ಸಾಕಷ್ಟು ಅನುದಾನ ಮಂಜೂರಾಗಿದ್ದು, ಜೀರ್ಣೋದ್ದಾರ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಜನತೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗೆ ಶಾಸಕರಾಗಿ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಮಾಜಿ ಶಾಸಕ ಎಚ್.ಸಿ.ಬಸವರಾಜ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ. ಪ್ರಶಾಂತ ಗೌಡ, ಎಂ.ಎಂ.ರಾಜೇಗೌಡ ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಭದ್ರ, ಮಾಜಿ ಜಿ.ಪಂ.ಸದಸ್ಯ ವಿ. ರಾಜೇಂದ್ರ, ಮುಖಂಡರಾದ ಪರೀಕ್ಷಿತ್ ಕುಮಾರ್, ಕೆ.ಕೆ. ನಾರಾಯಣ, ಮಧು, ಯೋಗೀಶ್, ವಿನಯ್, ಅಶೋಕ್, ಬೈಲಕುಪ್ಪೆ ಪ್ರವೀಣ್, ಆರ್.ಟಿ.ಸತೀಶ್, ನಳಿನಿ, ಗೀತಾ, ಶುಭಾಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net