

ಸೊರಬ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶಿವನ ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜೆ ಜರುಗಿತು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್‌ಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವಪತ್ರೆ, ಮುತುಗದ ಹೂವು, ಪಾರಿಜಾತ ಹೂವು ಸೇರಿದಂತೆ ವಿವಿಧ ಪುಷ್ಪಗಳನ್ನು ಅರ್ಪಿಸಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಕಾರ್ಯಕ್ರಮದ ಅಂಗವಾಗಿ ಸಮೀಪದ ಶ್ರೀ ರಂಗನಾಥ ದೇವಾಲಯದಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ದಂಡಾವತಿ ನದಿಕಟ್ಟೆ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ 33ನೇ ವರ್ಷದ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಚಂದ್ರ ಮೌಳೇಶ್ವರ ಸ್ವಾಮಿಗೆ ಅರ್ಚಕ ವೃಂದದಿಂದ ಶತರುದ್ರಾಭಿಷೇಕ ನೆಡೆಯಿತು.
ಚಂದ್ರ ಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಕೋಟಿಪುರದ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆದವು.