

ಇದೊಂದು ಪುರುಷ ಕೇಂದ್ರಿತ ಸಮಾಜವಾಗಿದ್ದು, ಪುರುಷನ ದರ್ಪಕ್ಕೆ ಒಳಗಾಗಿ ಮಹಿಳೆ ಎರಡನೇ ದರ್ಜೆ ನಾಗರಿಕರಾಗಿ ಬೆಳೆಯಬೇಕು ಎಂಬ ಚಿಂತನೆ ದೇಶದಲ್ಲಿದೆ ಎಂದು ಮೆಡಿಕಲ್ ಸರ್ವಿಸ್ ಸೆಂಟರ್‌ನ ರಾಜ್ಯಾಧ್ಯಕ್ಷರಾದ ಡಾ.ಸುಧಾ ಕಾಮತ್ ಬೇಸರ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ವತಿಯಿಂದ ಗುರುವಾರ ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ಶೀರ್ಷಿಕೆಯಡಿ ನಡೆದ ಯುವಜನರ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬಸ್ಥರೇ ತಮ್ಮ ಹೆಣ್ಣು ಮಕ್ಕಳಿಗೆ ತಲೆ ತಗ್ಗಿಸಿ ಎಲ್ಲವನ್ನು ಸಹಿಕೊಳ್ಳಬೇಕು. ಪುರುಷನ ಎದುರು ಜೋರಾಗಿ ಮಾತನಾಡಬಾರದು ಎಂಬಿತ್ಯಾದಿ ಲಕ್ಷ್ಮಣ ರೇಖೆ ಹಾಕಿ ಕಟ್ಟಪಾಡಿನಲ್ಲಿ ಬೆಳೆಸುತ್ತಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯಗಳನ್ನು ವಿರೋಧಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಣ್ಣನ್ನು ನಿಂದಿಸುವ, ಹಾಸ್ಯದ ವಸ್ತುವಾಗಿಸುವ ಬಳಸುವ ಪ್ರವೃತ್ತಿ ನಮ್ಮಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭಯದಲ್ಲಿ ಓಡಾಡುವ ಪರಿಸ್ಥಿತಿ ಇದೆ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಿಂದ ಬಸ್ಸುಗಳಲ್ಲಿ, ಹೊರಗೆ ಓಡಾಡುವಾಗ ಅಷ್ಟೇ ಯಾಕೇ ಕುಟುಂಬದಲ್ಲಿಯೂ ದೌರ್ಜನ್ಯ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಹೆಣ್ಣು ಮಕ್ಕಳ ಶೀಲಾವನ್ನು ವೈಭವೀಕರಿಸಿ ನಡತೆ ಮೇಲೆ ಪೂರ್ವಗ್ರಹ ಹೊಂದಿರುವುದು. ಹೀಗಾಗಿ ವರದಿಯಾಗುತ್ತಿರುವ ಪ್ರಕರಣಗಳಿಗಿಂತ ಹೆಚ್ಚಿನ ಪಟ್ಟು ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಎಂದು ಹೇಳಿದರು.
ನೀನು ಗಂಡಸು ಯಾವ ರೀತಿಯಾದರು ಬೆಳೆಯಬಹುದು. ಗಂಡು ಪೌರುಷದಿಂದ ಅಕ್ರಮಣಾಕಾರಿಯಾಗಿ ಇರಬೇಕು ಎಂಬುದನ್ನು ಬಾಲ್ಯದಿಂದಲೇ ಕಲಿಸುತ್ತಾರೆ. ಇದು ನಿಜವಾದ ಪೌರುಷ ಅಲ್ಲ. ಸಮಾಜದ ಅನ್ಯಾಯಗಳನ್ನು, ಹೆಣ್ಣು ಮಕ್ಕಳ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟಿಸುವುದು ಪೌರುಷ. ಈ ರೀತಿ ಸಾಮಾಜಿಕ ಬದ್ಧತೆ ತೊರುವುದು ಪುರುಷ ವ್ಯಕ್ತಿತ್ವ ಭಾಗವಾಗಬೇಕು ಎಂದು ಹೇಳಿದರು.
ಮಹಿಳೆಯರು ಸಮಾಜದಲ್ಲಿ ಪ್ರಗತಿಯಲ್ಲಿ ತೊಡಗಿ ಸಮಾನತೆ ಸಮಾಜ ಕಟ್ಟಬೇಕು. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳು ತೊಡಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಸಾಗಿದರೆ ಲೈಗಿಂಕ ಮತ್ತು ಇತರೆ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಲೇನಿನ್ ಹೇಳಿದ್ದಾರೆ. ಹೆಣ್ಣು ಬೋಗದ ವಸ್ತುವಲ್ಲ ಎಂಬುದನ್ನು ಸಮಾಜ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಲೈಗಿಂಕ ಅಪರಾಧಗಳು-ಕಾರಣ ಮತ್ತು ಪರಿಹಾರಗಳ ಕುರಿತು ಜೆಎಸ್‌ಎಸ್ ಆಸ್ಪತ್ರೆಯ ಹಿರಿಯ ಮನೋವೈದ್ಯ ಡಾ.ಎಂ.ಕಿಶೋರ್ ಮಾತನಾಡಿದರು. ಅಖಿಲ ಭಾರತ ಎಐಡಿವೈಓನ ಉಪಾಧ್ಯಕ್ಷ ಡಾ.ಜಿ.ಎಸ್.ಕುಮಾರ್ ಇಂದಿನ ಯುವ ಮನಸ್ಸಿನ ತಲ್ಲಣಗಳ ಕುರಿತ ವಿಷಯ ಮಂಡಿಸಿದರು. ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಜಿಲ್ಲಾಧ್ಯಕ್ಷ ಟಿ.ಆರ್.ಸುನೀಲ್, ಜಿಲ್ಲಾ ಕಾರ್ಯದರ್ಶಿ ಎಸ್.ಸುಮಾ ಇದ್ದರು.