ಇಡೀ ರಾಜ್ಯಕ್ಕೆ ಮೂರು ತಿಂಗಳೊಳಗಾಗಿ ಏ-ಬಿ ಖಾತಾ ನೀಡಲು ಕ್ರಮ/ಪೌರಾಡಳಿತ ಸಚಿವ ರಹೀಮ್ ಖಾನ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಇ-ಖಾತಾ ಹಾಗೂ ಮೂಟೇಷನ್ ಕುರಿತು ಸಮಸ್ಯೆಯಿದ್ದು, ಇನ್ನೂ ಮೂರು ತಿಂಗಳೊಳಗಾಗಿ ಏ ಹಾಗೂ ಬಿ-ಖಾತಾ ನೀಡಲು ಕ್ರಮಕೈಗೊಳ್ಳಲಾಗುವುದೆಂದು ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಮ್ ಖಾನ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಂತರ ಸುದ್ಧಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ರಸ್ತೆ, ವಿದ್ಯುತ್, ನೀರು, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳು ಬೇಕಾಗಿವೆ. ಆದರೆ ಇವರು ಯಾವುದೇ ರೀತಿಯ ಆಸ್ತಿ ತೆರಿಗೆಯನ್ನು ಕಟ್ಟುತ್ತಿಲ್ಲ, ಕಾರಣ ಮ್ಯೂಟೇಷನ್ ಹಾಗೂ ಇ-ಖಾತಾ ಕುರಿತು ನಗರಸಭೆಗಳಲ್ಲಿ ದಾಖಲೆಗಳಿರುವುದಿಲ್ಲ. ಬೆಂಗಳೂರಿನಲ್ಲಿದAತೆ ಏ ಮತ್ತು ಬಿ ಖಾತಾ ರೀತಿಯಲ್ಲಿ ಕೋಲಾರ ಸೇರಿದಂತೆ ರಾಜ್ಯದಲ್ಲಿ ಎಲ್ಲರಿಗೂ ಅನ್ವಯುಸುವಂತೆ ಮಾಡಲು ಕ್ಯಾಬಿನೆಟ್‌ನಲ್ಲಿಡಲಾಗಿದ್ದು, ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಎ-ಬಿ ಖಾತಾ ನೊಂದಣಿ ಜಾರಿಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ತೃಪ್ತಿ ತಂದಿರುವುದಿಲ್ಲ ಎಂದ ಸಚಿವರು ೧-೨ ತಿಂಗಳೊಳಗಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಗಾಗ್ಗೆ ಅಭಿವೃದ್ಧಿ ಕುರಿತು ಸಭೆ ನಡೆಸಲು ತೀರ್ಮಾನಿಸಲಾಯಿತು.

ವ್ಯಾಪಾರ ಪರವಾನಗಿ(ಟ್ರೇಡ್ ಲೈಸನ್ಸ್):
ವ್ಯಾಪಾರ ಪರವಾನಿಗೆಯನ್ನು ಐದು ವರ್ಷಗಳಿಗೊಮ್ಮೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಒಂದೇ ವರ್ಷಕ್ಕೆ ವ್ಯಾಪರ ಪರವಾನಿಗೆ ನೀಡಲಾಗುತ್ತಿತ್ತು ಎಂದರು.

ತೆರಿಗೆ ವಸೂಲಾತಿ:
ತೆರಿಗೆ ವಸೂಲಾತಿಯಲ್ಲಿ ತೀವ್ರ ಕ್ರಮಕೈಗೊಳ್ಳಲು ದ್ರೋಣ್ ಸರ್ವೆ ಸಹಾಯವನ್ನು ಪಡೆದು ಇಂಡೀಕರಣ (ಅಪ್‌ಡೆಟ್) ಮಾಡಲಾಗುವುದು. ಒಂದೇ ಕಟ್ಟಡಕ್ಕೆ ಅನುಮತಿ ಪಡೆದು ೩ ಮತ್ತು ೪ಕ್ಕೂ ಅಂತಸ್ತುಗಳನ್ನು ಕಟ್ಟುತ್ತಿರುವುದು ಕಂಡು ಬರುತ್ತಿದ್ದು, ತೆರಿಗೆಯನ್ನು ಒಂದೇ ಕಟ್ಟಡಕ್ಕೆ ತುಂಬುತ್ತಿದ್ದಾರೆ. ಹೀಗಾಗಿ ತೆರಿಗೆಯ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಲು ದ್ರೋಣ್ ಸರ್ವೇ ಉಪಯುಕ್ತವಾಗಿದೆ. ಇದರಿಂದ ತೆರಿಗೆಯನ್ನು ಕಟ್ಟುನಿಟ್ಟಾಗಿ ಹಾಗೂ ವ್ಯವಸ್ಥೆಗನುಗುಣವಾಗಿ ತುಂಬಿಸಬಹುದಾಗಿದೆ ಎಂದರು.

ನೀರಿನ ತೆರಿಗೆ:
ಯಥೇಚ್ಛವಾಗಿ ದಿನನಿತ್ಯ ಬಳಸುವ ನೀರಿಗೆ ಸರ್ಕಾರವು ಶೇ.೫ ರಿಂದ ೧೦ ರಷ್ಟು ನೀರಿನ ಶುಲ್ಕವನ್ನು ವಿಧಿಸಿದ್ದರೂ ಸಾರ್ವಜನಿಕರು ಸರಿಯಾಗಿ ಕರವನ್ನು ತುಂಬುವುದಿಲ್ಲ ಹಾಗೂ ಸಂಬAಧಪಟ್ಟವರು ಕರ ಸಂಗ್ರಹಿಸಲು ಹೋಗುತ್ತಿಲ್ಲ. ಆದ್ದರಿಂದ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ವಸೂಲಿ ಮಾಡಲು ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸಲು ಕ್ಯಾಬಿನೇಟ್‌ಲ್ಲಿ ಮಂಡಿಸಲಾಗಿದೆ ಎಂದರು. ಈ ಸಂಘ ಸಂಸ್ಥೆಗಳವರಿಗೆ ಮನೆ, ಮನೆಗೆ ಹೋಗಿ ನೀರು ಹಾಗೂ ಆಸ್ತಿಯ ತೆರಿಗೆಯನ್ನು ವಸೂಲಿ ಮಾಡುವ ಕಾರ್ಯವನ್ನು ವಹಿಸಲಾಗುವುದು ಎಂದರು.

ಪ್ರತಿ ಜಿಲ್ಲೆಗೂ ಚರಂಡಿ, ಉದ್ಯಾನವನ ಇನ್ನಿತರೆ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ೧೦ ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಕೋಲಾರ ಜಿಲ್ಲೆಯ ನಗರಸಭೆಗಳಲ್ಲಿ ೧೦೭ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದ್ದು, ನೇಮಕಾತಿಗೊಳಿಸಲು ಮನವಿ ಮಾಡಿದರು. ಕೆ.ಜಿ.ಎಫ್ ನಗರಸಭೆ ವ್ಯಾಪ್ತಿಯಲ್ಲಿ-೨೩ ಹಾಗೂ ಮಾಲೂರು ಪುರಸಭೆ-೨೯ ಹುದ್ದೆಗಳು ಖಾಲಿಯಿದ್ದು, ವಿಶೇಷ ನೇಮಕಾತಿ ಮೂಲಕ ನೇಮಕ ಮಾಡಲು ಪೌರಾಡಳಿತ ನಿರ್ದೇಶನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ನಗರಸಭೆ ಆಯುಕ್ತರಾದ ಶಿವಾನಂದ ಅವರು ಈ ಬಗ್ಗೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಕೊತ್ತೂರು ಜಿ. ಮಂಜುನಾಥ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್ ಉಪಸ್ಥಿತರಿದ್ದರು.

ಚಿತ್ರ ೨೧ ಕೆ.ಎಲ್.ಆರ್. ೧೦ : ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಮ್ ಖಾನ್ ಅಧಿಕಾರಿ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಕೊತ್ತೂರು ಜಿ ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net