

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು ಭಾಗದ ವಿಶೇಷ ಆಹಾರ ಶೈಲಿ, ಉತ್ತರ ಕರ್ನಾಟಕ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿಯ ಸವಿರುಚಿ... ವಿವಿಧ ಶೈಲಿಯ ಆಹಾರ ಪದ್ಧತಿಗಳ ಪರಿಚಯ... ಸಸ್ಯಾಹಾರ ಹಾಗೂ ಮಾಂಸಾಹಾರ.... ಅಷ್ಟೇ ಅಲ್ಲ ! ಲಕ್ಷಾಂತರ ಜನರಿಗೆ ರುಚಿಸಿದ ಗುಜರಾತಿ, ರಾಜಸ್ಥಾನಿ, ಹೈದರಾಬಾದಿ, ಕೇರಳ, ಚೈನೀಸ್ ಮತ್ತು ಅಂತಾರಾಷ್ಟ್ರೀಯ ಪಾಕ ಶೈಲಿ ಖಾದ್ಯ...
14 ದಿನಗಳ ಕಾಲ ಆಯೋಜಿಸಿದ್ದ ದಸರಾ ಆಹಾರ ಮೇಳ ಈ ಬಾರಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಭಾನುವಾರ ತೆರೆ ಕಂಡಿತು.
ದೇಶ, ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಪ್ರವಾಸಿಗರು ದಸರಾ ಆಹಾರ ಮೇಳದಲ್ಲಿನ ವೈವಿದ್ಯ ಖಾದ್ಯವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಆಹಾರ ಮೇಳದಲ್ಲಿ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಫಿದಾ ಆಗಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ವಾರಗಳ ಕಾಲ ಆಯೋಜಿಸಿದ್ದ ದಸರಾ ಆಹಾರ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿ ದಿನ 70 ರಿಂದ 80 ಸಾವಿರ ಜನ ಆಹಾರ ಮೇಳಕ್ಕೆ ಭೇಟಿ ನೀಡಿದ್ದಾರೆ. 14 ದಿನಗಳಲ್ಲಿ ಒಟ್ಟಾರೆ 10 ಲಕ್ಷಕ್ಕೂ ಹೆಚ್ಚು ಜನ ಆಹಾರ ಮೇಳಕ್ಕೆ ಭೇಟಿ ನೀಡಿ, ತಮಗೆ ಇಷ್ಟವಾದ ಭೋಜನಗಳನ್ನು ಸವಿದಿದ್ದಾರೆ. ಪ್ರತಿ ದಿನ ಕುಟುಂಬದ ಜತೆಗೆ, ಸ್ನೇಹಿತರು, ಪ್ರೇಯಸಿ, ಪ್ರಿಯಕರನೊಂದಿಗೆ ಆಗಮಿಸಿ ಆಹಾರ ಪ್ರಿಯರು ನೆಚ್ಚಿನ ರುಚಿ ರುಚಿಯಾದ ತಿಂಡಿ ತಿನಿಸುಗಳ ಸವಿಯನ್ನು ಸವಿದರು. ಮೇಳದಲ್ಲಿ ಎಲ್ಲೆಲ್ಲೂ ಆಹಾರ ಪ್ರಿಯರೇ ತುಂಬಿ ತುಳುಕುತಿದ್ದರು.
ಬೆಳಗ್ಗೆ 10 ಗಂಟೆ ವೇಳೆಯಲ್ಲಿ ಬೆರಳೆಣಿಕೆಯಷ್ಟಿದ್ದ ಜನರು ಮಧ್ಯಾಹ್ನ ಆಗುತ್ತಿದಂತೆ ಪ್ರವಾಹದಂತೆ ಬರುತ್ತಿದ್ದರು. ಇನ್ನು ಸಂಜೆಯಾಗುತ್ತಿದ್ದಂತೆ ಆ ಸಂಖ್ಯೆ ಎರಡು ಪಟ್ಟು ಹೆಚ್ಚಾಗುತ್ತಿತ್ತು. ಆಹಾರ ಮೇಳದ ಆವರಣದಲ್ಲಿ ನಿಲ್ಲಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಮೇಳದಲ್ಲಿ ಈ ಬಾರಿ 160 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಈ ಪೈಕಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿದ್ದವು. ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜತೆಗೆ ಗುಜರಾತಿ, ರಾಜಸ್ಥಾನಿ, ಹೈದರಾಬಾದಿ, ಕೇರಳ, ಚೈನೀಸ್ ಮತ್ತು ಅಂತಾರಾಷ್ಟ್ರೀಯ ಪಾಕ ಶೈಲಿಗಳನ್ನೂ ಮೇಳದಲ್ಲಿ ಪರಿಚಯಿಸಲಾಗಿತ್ತು.
ಭರ್ಜರಿ ವ್ಯಾಪಾರ:
14 ದಿನವೂ ಆಹಾರ ಮೇಳದಲ್ಲಿ ಭರ್ಜರಿ ವ್ಯಾಪಾರ ಆಗಿದೆ. ಸಸ್ಯಾಹಾರಿ ತಿನಿಸಿನ ಜತೆಗೆ ಮಾಂಸಾಹಾರ ಖಾದ್ಯಗಳನ್ನು ಜನರು ಚಪ್ಪರಿಸಿದ್ದಾರೆ. ನಾಲ್ಕೈದು ಮಳಿಗೆಯಲ್ಲಿ ಬಿಟ್ಟು ಉಳಿದೆಲ್ಲರಿಗೂ ಭರ್ಜರಿ ಲಾಭವಾಗಿದೆ.
ಮಾಂಸಾಹಾರದ ಬೊಂಬು ಬಿರಿಯಾನಿ, ನಾಟಿಕೋಳಿ ಖಾದ್ಯ, ಗ್ರಿಲ್ ಸ್ಯಾಂಡ್‌ವಿಚ್, ಚೀಸ್ ಸ್ಯಾಂಡ್ ವಿಚ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಏಡಿ ಫ್ರೈ, ಕರಾವಳಿ ಶೈಲಿಯ ಸಮುದ್ರ ಮೀನಿನಿಂದ ತಯಾರಿಸಿದ ಕಬಾಬ್, ಫಿಶ್ ಫ್ರೈ, ತವಾ ಫ್ರೈ, ಚಿಕ್ಕನ್ ರೋಲ್, ಚಿಕನ್ ಬಿರಿಯಾನಿ, ಮಟನ್ ಚಾಪ್ಸ್, ಮಿರ್ಚಿ ಚಿಕನ್ ಪಲಾವ್, ನಾಟಿ ಕೋಳಿ ಮಡಕೆ ಬಿರಿಯಾನಿ, ಮರಾಟ ಚಿಕನ್, ದೊನ್ನೆ ಬಿರಿಯಾನಿಗೆ ಜನ ಫಿದಾ ಆದರು. ಸಸ್ಯಾಹಾರದ ಉತ್ತರಕರ್ನಾಟಕ ಭಾಗದ ಜೋಳದ ರೊಟ್ಟಿ, ಎಣ್ಣೆಗಾಯಿ, ಗಿರ್ಮಿಟ್, ಮಿರ್ಚಿ ಬಜ್ಜಿ, ಬಂಗಾರ್‌ಪೇಟ್ ಪಾನಿಪುರಿ, ಮೇಲುಕೋಟೆ ಪುಳಿಯೊಗರೆ, ದಾವಣಗೆರೆ ಬೆಣ್ಣೆ ದೋಸೆ, ರುಮಾಲು ರೋಟಿ, ಮಶ್ರೂಮ್ ಬಿರಿಯಾನಿ, ಧಾರವಾಡದ ಜೋಳದ ರೊಟ್ಟಿ, ಶೆಖೆ ಗಿಣ್ಣು, ಅವಲಕ್ಕಿ ಗಿಣ್ಣು, ಅವಲಕ್ಕಿ ಪಾಯಸ, ಕ್ಯಾರೆಟ್ ಹಲ್ವಾ, ಸಿಹಿ ಪೊಂಗಲ್, ಖಾರ ಪೊಂಗಲ್, ವಡಾಪಾವ್, ಪಾವ್ ಬಾಜಿ, ಡ್ರೈ ಗೋಬಿ, ಡ್ರೈ ಮಶ್ರೂಮ್, ಬಜ್ಜಿ, ಪಕೋಡ, ಮಶ್ರೂಮ್ ಗೋಬಿ, ಮಶ್ರೂಂ ಚಿಲ್ಲಿ, ಪಡ್ಡು ಶೇಂಗಾ ಚಟ್ನಿ, ಸೌತೆಕಾಯಿ ರೊಟ್ಟಿ, ಮಸಾಲೆ ಕಡುಬು ಹೀಗೆ ಹಲವು ತಿನಿಸನ್ನು ಚಪ್ಪರಿಸಿದರು. ಎಲ್ಲ ದಿನವೂ ದಸರೆಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಜನ ಮಧ್ಯಾಹ್ನ ಮತ್ತು ಸಂಜೆಯಾಗುತ್ತಲೇ ಆಹಾರ ಮೇಳದತ್ತ ಬಂದು ತಮಗೆ ಇಷ್ಟವಾದ ಖಾದ್ಯಗಳನ್ನು ಸವಿದರು.
ಕಡೆ ದಿನ ಜನವೋ ಜನ! ಕಡೆಯ ದಿನವೆಂದೋ, ರಜಾ ದಿನದ ಕಾರಣವೋ, ಆಹಾರದ ಮೇಲಿನ ವ್ಯಾಮೋಹವೊ ಒಟ್ಟಿನಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಕಡೆಯ ದಿನವಾದ ಭಾನುವಾರ ಜನವೋ ಜನ...! ಈಗಾಗಲೇ ದಸರೆಯ ಎಲ್ಲ ಕಾರ್ಯಕ್ರಮಗಳು ಮುಗಿದಿದ್ದು, ದಸರೆಯ ಆಕರ್ಷಣೆಯಲ್ಲೊಂದಾದ ಆಹಾರ ಮೇಳಕ್ಕೆ ಭಾನುವಾರ ಸಾವಿರಾರು ಆಹಾರ ಪ್ರಿಯರು ಲಗ್ಗೆಯಿಟ್ಟರು. ಕುಟುಂಬದ ಜತೆಗೆ, ಸ್ನೇಹಿತರ ಜತೆ ಆಗಮಿಸಿ ಆಹಾರ ಪ್ರಿಯರು ನೆಚ್ಚಿನ ರುಚಿ ರುಚಿಯಾದ ತಿಂಡಿ ತಿನಿಸುಗಳ ಸವಿಯನ್ನು ಸವಿದರು. ಮಧ್ಯಾಹ್ನದ ವೇಳೆಯಲ್ಲಿ ಬೆರಳೆಣಿಕೆಯಷ್ಟಿದ್ದ ಜನರು ಸಂಜೆಯಾಗುತ್ತಿದ್ದಂತೆ ಪ್ರವಾಹದಂತೆ ಬಂದರು. ಭರ್ಜರಿ ವ್ಯಾಪಾರ: ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿದ ಕಾರಣ ಆಹಾರ ಮೇಳದಲ್ಲಿ ಕಡೆಯ ದಿನವೂ ಭರ್ಜರಿ ವ್ಯಾಪಾರ ನಡೆಯಿತು. ನಾನಾ ಬಗೆಯ ತಿನಿಸುಗಳ ಅಂಗಡಿ ಮುಂದೆ ಜಮಾಯಿಸಿದ್ದ ಜನರು, ತಮಗಿಷ್ಟವಾದ ತಿಂಡಿಯನ್ನು ಚಪ್ಪಿರಿಸಿದರು. ಅದರಲ್ಲೂ ಕರಿದ ಪದಾರ್ಥಗಳಾದ ಬಜ್ಜಿ-ಬೋಂಡ, ಗೋಬಿಮಂಚೂರಿ ಮತ್ತು ಪಾನಿಪುರಿ, ಬೇಲ್‌ಪುರಿ ಕೊಂಚ ಹೆಚ್ಚಾಗಿಯೇ ಮಾರಾಟವಾದವು. ಮಾಂಸಾಹಾರಿಗಳಿಗೆ ಪ್ರಿಯವಾದ ಬಂಬೂ ಬಿರಿಯಾನಿ, ಚಿಕನ್ ಕಬಾಬ್, ಫಿಶ್ ಕಬಾಬ್, ಬನ್ನೂರು ಪಲಾವ್ ಮತ್ತು ಬಿರಿಯಾನಿ ಅಂಗಡಿಗಳ ಮುಂದೆ ಸಾಲುಗಟ್ಟಿದ್ದ ಜನರು, ನೂಕುನುಗ್ಗಲಿನ ನಡುವೆ ರುಚಿ ಸವಿದರು.
ದಸರಾ ಮಹೋತ್ಸವದ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಆಹಾರ ಮೇಳಕ್ಕೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿ ದಿನ 70 ರಿಂದ 80 ಸಾವಿರ ಜನ ಆಹಾರ ಮೇಳಕ್ಕೆ ಭೇಟಿ ನೀಡಿದ್ದಾರೆ. ನಾಲ್ಕೈದು ಜನರಿಗೆ ಬಿಟ್ಟು ಉಳಿದೆಲ್ಲ ವ್ಯಾಪಾರಿಗಳಿಗೂ ಒಳ್ಳೆಯ ವ್ಯಾಪಾರವಾಗಿದೆ. ಚಂದ್ರಶೇಖರ್ ಕಾರ್ಯಾಧ್ಯಕ್ಷ, ಆಹಾರ ಮೇಳ ಉಪ ಸಮಿತಿ