

ಸಿಡ್ನಿ/ನವದೆಹಲಿ: ಮಾರಕ ಡೆಲ್ಟಾ ಪ್ರಭೇದದ ನಂತರ, ಹೊಸ ರೂಪಾಂತರಿ ಒಮಿಕ್ರಾನ್ ಮೇಲೆ ವಿಶ್ವದ ಗಮನ ಕೇಂದ್ರೀಕೃತವಾಗಿರುವ ಸದ್ಯದ ಸನ್ನಿವೇಶದಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದಲ್ಲಿ ಹೊಸದೊಂದು ಪ್ರಭೇದ ಪತ್ತೆಯಾಗಿದೆ. ಹೊಸ ವೈರಾಣುವಿನ ಮೂಲ ಮತ್ತಿತರ ಅಂಶಗಳು ಇನ್ನಷ್ಟೇ ದೃಢಪಡಬೇಕಿದೆ ಎಂದು ಕ್ವೀನ್ಸ್ಲ್ಯಾಂಡ್ನ ಹಿರಿಯ ಆರೋಗ್ಯ ಅಧಿಕಾರಿ ಪೀಟರ್ ಏಟ್ಕೆನ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ಒಬ್ಬ ಪ್ರಯಾಣಿಕನಲ್ಲಿ ಒಮಿಕ್ರಾನ್ ವಂಶಾವಳಿಯನ್ನೇ (ಲೈನೇಜ್) ಹೋಲುವಂಥ ಹೊಸ ವೈರಸ್ ಕಂಡುಬಂದಿದೆ. ಮೂಲ ಒಮಿಕ್ರಾನ್ನಲ್ಲಿರುವ ಅರ್ಧದಷ್ಟು ರೂಪಾಂತರಿಗಳು ಹೊಸ ತಳಿಯಲ್ಲಿವೆ ಎಂದೂ ಏಟ್ಕನ್ ವಿವರಿಸಿದ್ದಾರೆ.
ಒಮಿಕ್ರಾನ್ ಗುಂಪಿಗೇ ಸೇರಿಸಬಹುದಾದ ಲಕ್ಷಣಗಳನ್ನು ಇದು ಹೊಂದಿದೆ. ಆದರೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಈಗ ‘ಒಮಿಕ್ರಾನ್’ ಮತ್ತು ‘ಒಮಿಕ್ರಾನ್ನಂಥ’ ಪ್ರಭೇದ ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯಗಳಿಗೆ ಕೇಂದ್ರ ಸೂಚನೆ: ಒಮಿಕ್ರಾನ್ ತಳಿಯ ಭೀತಿ ಹಿನ್ನೆಲೆಯಲ್ಲಿ ಸೋಂಕನ್ನು ನಿಭಾಯಿಸಲು ಅನುಕೂಲವಾಗುವಂತೆ ಕೋವಿಡ್-19 ಚಿಕಿತ್ಸೆಗೆ ಬಳಸುವ ಎಂಟು ಮಹತ್ವದ ಔಷಧಿಗಳ ಸಾಕಷ್ಟು ಕಾಪು ದಾಸ್ತಾನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರ ಗುರುವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಆಸ್ಪತ್ರೆಗಳ ಸನ್ನದ್ಧತೆಯನ್ನು ಪರಿಶೀಲಿಸುವಂತೆಯೂ ಕೇಂದ್ರ ಸೂಚಿಸಿದೆ.
ಜನವರಿ 31ರ ವರೆಗೆ ವಿಮಾನ ರದ್ದು: ಒಮಿಕ್ರಾನ್ ಆತಂಕದ ಕಾರಣ, ನಿಯೋಜಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟ ನಿಷೇಧವನ್ನು 2022ರ ಜನವರಿ 31ರವರೆಗೆ ವಿಸ್ತರಿಸಲಾಗುವುದೆಂದು ನಾಗರಿಕ ವಿಮಾನಯನ ಮಹಾ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ತಿಳಿಸಿದೆ.