

ಶೃಂಗೇರಿ: ಈಡಿಗರ ಸಮುದಾಯ ಆರ್ಥಿಕವಾಗಿ ಪ್ರಾಬಲ್ಯವಾಗಿ ಸಮಾಜದ ಋಣ ತೀರಿಸಬೇಕು. ನಮ್ಮಲ್ಲಿ 26 ಉಪಪಂಗಡಗಳು ಇದ್ದರೂ ಸಾಂಕ ಮನೋಭಾವನೆಯಿಂದ ಸುಶಿಕ್ಷಿತರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮಿ ತಿಳಿಸಿದರು.
ಅವರು ಭಾನುವಾರ ತಾಲೂಕು ಆರ್ಯ ಈಡಿಗರ ಸಂಘದ ನೂತನ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸಾಂಸ್ಕೃತಿಕ ಆಧಾರದ ಮೇಲೆ ನಮ್ಮವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರು ವ್ಯಕ್ತಿತ್ವದಿಂದ ಆದರ್ಶರಾಗಿ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಗಳಿಸಿದ್ದಾರೆ. ಸಂಘಟನೆ ಹಾಗೂ ಶಿಕ್ಷಣದಿಂದ ನಾವು ಗುರಿ ತಲುಪಬಹುದು. ನಾವು ಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನೀಡಿದರೆ ಅದು ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.
ಗೌರಿಗದ್ದೆ ಶ್ರೀ ಅವಧೂತ ವಿನಯ ಗುರೂಜಿ ಮಾತನಾಡಿ, ಶ್ರೀ ನಾರಾಯಣಗುರು ಅವರು ಪರಬ್ರಹ್ಮ ತತ್ವದ ಪ್ರತೀಕರಾಗಿದ್ದರು. ಅವರು ಸಕಾರಾತ್ಮಕ ಚಿಂತನೆಯಿಂದ ಬ್ರಹ್ಮಜ್ಞಾನವನ್ನು ಹಂಚಿದವರು. ರಾಜಕೀಯ ಜೀವನದಲ್ಲಿ ಅವಧಿ ಮುಗಿದ ಬಳಿಕ ಕುರ್ಚಿಯಿಂದ ಇಳಿಯಬೇಕು. ಆದರೆ ಧರ್ಮಕ್ಕೆ ಅಂತ್ಯವಿಲ್ಲ. ರಾಜಕಾರಣದಲ್ಲಿ ರಾಜಧರ್ಮವಿರಬೇಕು. ನಾವು ಮಾಡುವ ಸತ್ಕಾರ್ಯಗಳಲ್ಲಿ ರಾಜಕಾರಣವಾಗಬಾರದು. ಹಸಿದವನಿಗೆ ಅನ್ನ ನೀಡಿದರೆ ದೇಗುಲ ಕಟ್ಟಿದ್ದ ಪುಣ್ಯ ನಮಗೆ ಪ್ರಾಪ್ತವಾಗುತ್ತದೆ. ನಮ್ಮನ್ನು ನಾವು ಅರಿತುಕೊಳ್ಳುವುದೇ ನಿಜವಾದ ಮೌಲ್ಯ ಎಂದು ತಿಳಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಶ್ರೀ ನಾರಾಯಣಗುರು ಮೌಲ್ಯಗಳು ಮುಖ್ಯ ಧ್ಯೇಯವಾಗಬೇಕು. ಸಮಾಜದ ಮೂಢನಂಬಿಕೆ ಪಿಡುಗನ್ನು ಹೋಗಲಾಡಿಸಿದ ನಾರಾಯಣಗುರು ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಯುವಪೀಳಿಗೆಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ. ಅವರು ಸಮಾಜದ ಸುಸಂಸ್ಕೃತ ವ್ಯಕ್ತಿಯಾಗಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಈಡಿಗರು ಪರಿಶ್ರಮ ಜೀವಿಗಳು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ನಾರಾಯಣಗುರುಗಳ ಪ್ರೇರಣೆಯಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸುವ ಕಾಯಕದಲ್ಲಿ ಅವರು ನಿರಂತರ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಸಂಘಕ್ಕೆ 10 ಲಕ್ಷ ರೂಪಾಯಿ ಅನುದಾನ ನೀಡಿದರು.
ಆಶೀಶ್ ದೇವಾಡಿಗ ಹಾಗೂ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಅಮ್ಮ ೌಂಡೇಶನ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಜಿಲ್ಲಾ ನಾರಾಯಣಗುರು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್, ಎಂ.ಆರ್.ಪೂರ್ಣೇಶ್, ತಾಲೂಕು ಈಡಿಗರ ಸಂಘದ ಅಧ್ಯಕ್ಷ ಎ.ಆರ್.ನಾರಾಯಣ ಇದ್ದರು