ಆಧಾರ್ ಸೇವಾ ಕೇಂದ್ರ ಇಲ್ಲದೆ ಪರದಾಟ

ಆಧಾರ್ ಸೇವಾ ಕೇಂದ್ರ ಇಲ್ಲದೆ ಪರದಾಟ
Published on

ಸರಗೂರು: ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಆಧಾರ್ ಸೇವಾ ಕೇಂದ್ರವೂ 3 ತಿಂಗಳಿಂದ ಸ್ಥಗಿತಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ಸಮಸ್ಯೆ ಎದುರಿಸುವಂತಾಗಿದೆ.

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು ಹಾಗೂ ಆಧಾರ್ ಅಪ್ಡೇಟ್ ಕಡ್ಡಾಯವಾಗಿದೆ. ಆದರೆ, ಸರಗೂರು ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಇಲ್ಲದೆ ಜನಸಾಮಾನ್ಯರು ಪರದಾಡುವಂತಾಗಿದೆ. ದೂರದ ಎಚ್.ಡಿ.ಕೋಟೆ ಅಥವಾ ನಂಜನಗೂಡಿಗೆ ಜನರು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಯಮದಂತೆ ಈ ಹಿಂದೆ ಸರ್ಕಾರಿ ಕಚೇರಿ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಆಧಾರ್ ಸೇವಾ ಕೇಂದ್ರ ತೆರೆದು ತಿದ್ದುಪಡಿ ಕಾರ್ಯನಡೆಸಲಾಗುತ್ತಿದ್ದು, ಆದರೆ ಈಗ ಸರಗೂರು ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ.

ವೃದ್ಧರು, ಅಂಗವಿಕಲರಿಗೆ ತೊಂದರೆ: ಸರಗೂರಿನ ಎಸ್‌ಬಿಐ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಸ್ಥಗಿತಗೊಂಡಿರುವುದರಿಂದ ವಯಸ್ಕರು, ಅಂಗವಿಕಲರು, ದೂರದ ಊರುಗಳಿಂದ ಬರುವವರು ತೊಂದರೆ ಅನುಭವಿಸುವಂತಾಗಿದೆ.

ಚಿಕ್ಕಬರಗಿ, ಕುರ್ಣೇಗಾಲ, ಮೊಳೆಯೂರು, ಬಾವಿಕೆರೆ ಹಾಡಿ, ಮುತ್ತಿಗೆ ಹುಂಡಿ, ಕೆಬ್ಬೇಪುರಹಾಡಿ, ನಡಾಡಿ, ಮುಳ್ಳೂರು, ಹೊಸಹೆಗ್ಗುಡಿಲು, ಹಾದನೂರು, ಬಡಗಲಪುರ, ಲಂಕೆ, ಕಟ್ಟೆ ಹುಣಸೂರು, ನಂಜೀಪುರ, ಬಿದರಹಳ್ಳಿ, ಕೂಡಗಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಸರಗೂರಿನಲ್ಲಿರುವ ಆಧಾರ್ ಸೇವಾ ಕೇಂದ್ರವನ್ನು ಅವಲಂಬಿಸಿದ್ದರು. ಸದ್ಯ ಸರಗೂರು ಆಧಾರ್ ಸೇವಾಕೇಂದ್ರ ಸ್ಥಗಿತಗೊಂಡಿರುವುದರಿಂದ ಎಚ್.ಡಿ.ಕೋಟೆ ಅಥವಾ ನಂಜನಗೂಡಿಗೆ ತೆರಳಬೇಕಾಗಿದೆ. ಆದರೆ, ಇಲ್ಲಿ ಒಂದೇ ಆಧಾರ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಕಾಡಂಚಿನ ಜನರು ಬೆಳಗ್ಗೆಯೇ ಬಂದು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಹೆಚ್ಚಿನ ಜನರಿದ್ದರೆ ಕಾದು-ಕಾದು ವಾಪಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ಕೂಡ ಸಮಸ್ಯೆ ಉಂಟಾಗುತ್ತದೆ. ಇದರಿಂದ ಜನಸಾಮಾನ್ಯರ ಸಮಯ ಹಾಗೂ ಹಣ ಎರಡೂ ಕೂಡ ವ್ಯರ್ಥವಾಗುತ್ತಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಧಾರ್ ಅನಿವಾರ್ಯವಾಗಿರುವುದರಿಂದ ಸರಗೂರು ಪಟ್ಟಣದಲ್ಲಿ ಆಧಾರ್ ಸೇವಾಕೇಂದ್ರ ತೆರೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net