

ಮೂಡಿಗೆರೆ: ಗೋಣಿಬೀಡು ಸಮೀಪದ ಜಿ.ಅಗ್ರಹಾರದ ಆದಿಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಾರ್ಷಿಕ ಜಾತ್ರೆ ಪ್ರಯುಕ್ತ ಸೋಮವಾರ ರಥೋತ್ಸವ ನಡೆಯಿತು.
ಆದಿಸುಬ್ರಹ್ಮಣ್ಯ ಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ವಿವಿಧ ಅಭಿಷೇಕ ಮತ್ತು ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಮಧ್ಯಾಹ್ನ ಸ್ವಾಮಿಯ ರಥಾರೋಹಣ ನೆರವೇರಿಸಿ ಪೂಜಾ ಕೈಂಕರ್ಯ ನಡೆಸಲಾಯಿತು. ಭಕ್ತರು ಆದಿಸುಬ್ರಹ್ಮಣ್ಯ ಸ್ವಾಮಿಗೆ ಜೈಕಾರ ಹಾಕಿ ರಥವನ್ನು ಎಳೆದು ಸಂಭ್ರಮಿಸಿದರು.
ರೈತರು ಬೆಳೆದ ಕಾಫಿ, ಬಾಳೆ, ಕಾಳುಮೆಣಸು, ಭತ್ತ, ಅಡಕೆ, ತೆಂಗಿನಕಾಯಿ ಮತ್ತಿತರ ಬೆಳೆಯ ಮೊದಲ ಫಸಲನ್ನು ರಥಕ್ಕೆ ಅರ್ಪಿಸಿ ಭಕ್ತಿಭಾವ ಮೆರೆದರು. ನವದಂಪತಿಗಳು ಪೂಜೆ ಸಲ್ಲಿಸಿದರು. ಮೂಡಿಗೆರೆ, ಗೋಣಿಬೀಡು, ಬಣಕಲ್ ಹೋಬಳಿಗಳ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವಿಸ್ಮಯ ನಡೆಯುತ್ತದೆ. ಗರುಡ ಆಕಾಶದಲ್ಲಿ ಹಾರಾಡುತ್ತ ರಥಕ್ಕೆ ಮೂರು ಸುತ್ತು ಹಾಕುತ್ತದೆ. ನಂತರ ರಥವನ್ನು ಎಳೆಯುವ ಶಾಸ್ತ್ರ ಆರಂಭವಾಗುತ್ತದೆ. ದೇವಸ್ಥಾನದ ಅರ್ಚಕ ಸುಬ್ರಾಯ ಭಟ್ ನೇತೃತ್ವದಲ್ಲಿ ಪೂಜೆ ಪುರಸ್ಕಾರ ನಡೆಯಿತು.
ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಸೋಮಶೇಖರ್, ಪಿಎಸ್‌ಐಗಳಾದ ಹರ್ಷವರ್ಧನ್, ಶ್ರೀನಾಥ್ ರೆಡ್ಡಿ, ರೇಣುಕಾ, ದಿಲೀಪ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎನ್.ಜೆ.ಜಯರಾಮ್, ಪದಾಧಿಕಾರಿಗಳಾದ ವಿ.ಕೆ.ಶಿವೇಗೌಡ, ಕೆ.ಟಿ.ಜಗದೀಶ್, ಕೆ.ಆರ್.ಮಹೇಶ್, ಸತ್ಯನಾರಾಯಣ ಭಟ್, ನೇಮಿರಾಜ್ ಇತರರ ಸಮ್ಮುಖದಲ್ಲಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು.