

ಪತ್ನಿ ಬದುಕಿದ್ದರೂ ಸತ್ತಿದ್ದಾಳೆಂದು ಪೊಲೀಸರು ಪತಿಯ ಮೇಲೆ ಕೊಲೆ ಆರೋಪ ಹೊರೆಸಿ ಜೈಲು ಪಾಲಾಗುವಂತೆ ಮಾಡಿದ್ದ ಪ್ರಕರಣ ವಿಚಾರಣೆ ನಡೆಸಿದ್ದ ಮೈಸೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಪ್ರಕರಣದ ಆರೋಪಿಯಾಗಿದ್ದ ಆದಿವಾಸಿ ಸುರೇಶ್‌ಅವರನ್ನು ಗೌರವಯುತವಾಗಿ ನಿರಪರಾದಿಯಾಗಿ ಬಿಡುಗಡೆ ಮಾದ್ದಲ್ಲದೇ, ಸುಳ್ಳು ದಾಖಲೆ ಮತ್ತು ಸಾಕ್ಷಿ ಸೃಷ್ಟಿಸಿದ ತನಿಖಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ಮೃತಪಟ್ಟಿದ್ದಾಳೆನ್ನಲಾಗಿದ್ದ ಮಹಿಳೆಯು ಇತ್ತೀಚೆಗೆ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ನಂತರ ಪ್ರಕರಣಕ್ಕೆ ರೋಚಕ ತಿರುವು ದೊರೆತಿತ್ತು. ಆ ಸಂದರ್ಭ ಆಕೆಯ ಪತಿ ಆದಿವಾಸಿ ಸುರೇಶ್ ಮೇಲೆ ಪೊಲೀಸ್ ಅಧಿಕಾರಿ ಹೊರಿಸಿದ್ದ ಆರೋಪ ಸುಳ್ಳು ಎಂಬುದು ಎಲ್ಲರಿಗೂ ಮನವರಿಕೆಯಾಗಿತ್ತು.
ಪ್ರಕರಣ ಸಂಬಂಧ ಏ.17ರಂದು ಆರೋಪಿ ಪರ ವಕೀಲರು ಮತ್ತು ಸರ್ಕಾರಿ ಅಭಿಯೋಜಕರು, ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿದ್ದ 5ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿದ್ದರು. ಮಧ್ಯಾಹ್ನ 3.15ಕ್ಕೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಸುರೇಶ್‌ನನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿದ್ದಲ್ಲದೇ ಸುರೇಶ್‌ನನ್ನು ಗೌರವಯುತವಾಗಿ ನಿರಪರಾದಿಯಾಗಿ ಬಿಡುಗಡೆ ಮಾಡಿ, ಆತನಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಅಂತೆಯೇ, ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್ 193, 195 (ಸುಳ್ಳು ಪ್ರಕರಣ ಸೃಷ್ಟಿಸಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಕೆ) ಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಮಾರ್ಗದರ್ಶನ ನೀಡಿದರು.
ಪ್ರಕರಣದ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್, ಬೆಟ್ಟದಪುರ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಮೈಸೂರು ಐಜಿಪಿಗೆ ಸೂಚಿಸಿದರು. ಪ್ರಸ್ತುತ ಪ್ರಕರಣದಲ್ಲಿ ದಾಖಲಾದ ಯುಡಿಆರ್ ಕುರಿತು ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.