ಆದಿವಾಸಿ ಮಕ್ಕಳಿಗೆ ಶಾಲೆ ನಿರ್ಮಿಸಲು 2 ಎಕರೆ ಜಾಗ ನೀಡಿ

27-JUNE-GPT-4 (1)
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಜತೋಥು ಹುಸೇನ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಾ.ಕಲ್ಯಾಣ್ ರೆಡ್ಡಿ, ಅಶೋಕ್ ಕುಮಾರ್ ಲಕ್ಕರ್ಸು, ಅಕ್ಷಯ್ ತ್ರಿಪಾಟಿ, ಎಂ.ಕಿರಣ್ ಕುಮಾರ್, ಎಚ್.ಎಸ್.ಬಿಂದ್ಯಾ, ಟಿ.ರಮೇಶ್ ಬಾಬು, ಕೆ.ಎಂ.ಸಿದ್ದಲಿಂಗಪ್ಪ, ಎನ್.ಜಯಕುಮಾರ್, ಎನ್.ಸಿ.ಮಹದೇವ ಇದ್ದರು.
Published on

ಗುಂಡ್ಲುಪೇಟೆ : ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯ ಜತೋಥು ಹುಸೇನ್ ಶುಕ್ರವಾರ ಬಂಡೀಪುರದ ವಾಲ್ಮೀಕಿ ಆದಿವಾಸಿ ಬುಡಕಟ್ಟು ಶಾಲೆಗೆ ಭೇಟಿ ನೀಡಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಿ ಮಕ್ಕಳಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸದಿರುವ ಹಾಗೂ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.

ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಶಾಲೆಯಲ್ಲಿ 7 ವಿದ್ಯಾರ್ಥಿಗಳು ಇದ್ದು ಇವರಿಗೆ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ಒದಗಿಸಲಾಗಿದೆ. ನಲಿ ಕಲಿ ಯೋಜನೆಯಲ್ಲಿ ಮಕ್ಕಳಿಗೆ ಅಗತ್ಯವಾದ ಶಿಕ್ಷಣ ನೀಡಲಾಗುತ್ತಿದೆ. ಹುಲಿ, ಚಿರತೆಯ ಭೀತಿಯಿಂದ ಹೆಚ್ಚಿನ ಆದಿವಾಸಿ ಜನರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ, ಆದರೆ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ವಿವರಿಸಿದರು.

ಇದು ಸೂಕ್ಷ್ಮ ಪರಿಸರ ವಲಯದ ಅರಣ್ಯಕ್ಕೆ ಸೇರಿದ್ದು ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದರೆ ಒಳ್ಳೆಯದು ಎಂದು ಬಂಡೀಪುರ ವಲಯಾರಣ್ಯಾಧಿಕಾರಿ ಎನ್.ಸಿ.ಮಹದೇವ ಉತ್ತರಿಸಿದರು.

ಬುಡಕಟ್ಟು ಹಾಗೂ ಆದಿವಾಸಿ ಜನರನ್ನು ಸರ್ಕಾರ ಕಾಡಿನಿಂದ ಹೊರತಂದು ಅವರ ಕಲ್ಯಾಣಕ್ಕಾಗಿ ಎಲ್ಲ ಸವಲತ್ತುಗಳನ್ನು ನೀಡುತ್ತಿದೆ. ಆದಿವಾಸಿಗಳು ಅರಣ್ಯದ ಉಳಿವಿಗೆ ತುಂಬ ತ್ಯಾಗ ಮಾಡಿದ್ದರೂ ಅರಣ್ಯ ಇಲಾಖೆ ಶಾಲೆಯನ್ನು ವಿಸ್ತರಿಸಲು ಅವಕಾಶ ನೀಡದಿದ್ದರೆ ಈ ಜನರಿಗೆ ಏನು ಉಪಯೋಗ ಎಂದು ಪ್ರಶ್ನಿಸಿ ವನ್ಯಜೀವಿಗಳ ಜತೆಗೆ ಆದಿವಾಸಿಗಳ ಅಭಿವೃದ್ಧಿಗೂ ನೆರವು ನೀಡಿ, ಶಾಲೆ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ನೀಡಿ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯ ಜತೋಥು ಹುಸೇನ್ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಆಯೋಗದ ನಿರ್ದೇಶಕ ಡಾ.ಕಲ್ಯಾಣ್ ರೆಡ್ಡಿ, ಆಪ್ತಸಹಾಯಕ ಅಶೋಕ್ ಕುಮಾರ್ ಲಕ್ಕರ್ಸು, ಹಿರಿಯ ಪರಿಶೀಲನಾಧಿಕಾರಿ ಅಕ್ಷಯ್ ತ್ರಿಪಾಟಿ, ಸಲಹೆಗಾರ ಎಂ.ಕಿರಣ್ ಕುಮಾರ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್, ಬಂಡೀಪುರ ಆರ್‌ಎಫ್‌ಒ ಎನ್.ಸಿ.ಮಹದೇವ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net