ವಿಜಯವಾಣಿ ಸುದ್ದಿಜಾಲ ಕೋಲಾರ
ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಬಾಕಿ ಉಳಿಸಿಕೊಂಡಿರುವ ಕಂದಾಯವನ್ನು ಆಗಸ್ಟ್ ತಿಂಗಳ ಅಂತ್ಯದವರೆವಿಗೆ ಪಾವತಿ ಮಾಡಿದರೆ ಶೇ.೫ ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಗರಸಭೆ ಆಯುಕ್ತ ನವೀನ್‌ಚಂದ್ರ ತಿಳಿಸಿದರು.
ನಗರದ ಕೂಡಾ ಬಡಾವಣೆಯಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ೩೪ ಸಾವಿರ ಆಸ್ತಿಗಳಿದ್ದು, ಇದುವರೆಗೆ ೧೨ ಸಾವಿರ ಆಸ್ತಿಗಳಿಗೆ ಮಾತ್ರ ಇ-ಖಾತೆ ಮಾಡಲಾಗಿದೆ. ಉಳಿದ ಆಸ್ತಿ ಮಾಲೀಕರು ಬಾಕಿ ತೆರಿಗೆ ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ತಕ್ಷಣ ಇ-ಖಾತೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಕAದಾಯ ಪಾವತಿಸಲು ನಗರದ ೫೩ ವಾರ್ಡುಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಪ್ರತಿ ವಾರ್ಡಿನಲ್ಲಿ ಕ್ಯಾಂಪ್‌ಗಳನ್ನು ಏರ್ಪಡಿಸಲಾಗಿದೆ.
ವಾರ್ಡ್ ಸಂಖ್ಯೆ ೧ರ ಕೆ.ಯು.ಡಿ.ಎ ಬಡಾವಣೆ ಹಾಗೂ ಶ್ರೀ ದೇವರಾಜ ಅರಸು ಬಡಾವಣೆಯಲ್ಲಿ ಎರಡನೇ ಸುತ್ತಿನ ಕ್ಯಾಂಪ್‌ನ್ನು ೨ ದಿನಗಳ ಕಾಲ ನಡೆಯುತ್ತಿದ್ದು, ಕಳೆದ ಎರಡು ದಿನಗಳಲ್ಲಿ ೮ ಲಕ್ಷಕ್ಕೂ ಹೆಚ್ಚು ಕಂದಾಯ ಸಂಗ್ರಹವಾಗಿದೆ. ಸರ್ವರ್ ಸಮಸ್ಯೆಯಿಂದ ಕೆಲವರಿಗೆ ತೊಂದರೆ ಉಂಟಾದರೂ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಕೆ.ಯು.ಡಿ.ಎ. ಅಥವಾ ಟೌನ್ ಪ್ಲಾನ್ ಅನುಮೋದಿತ ಹಾಗೂ ಮೂಲಭೂತ ಸೌಕರ್ಯಗಳಿರುವ ಆಸ್ತಿಗಳಿಗೆ ಎ-ಖಾತೆ, ಅನುಮೋದನೆ ಇಲ್ಲದ ಆಸ್ತಿಗಳಿಗೆ ಬಿ-ಖಾತೆ ನೀಡಲಾಗುತ್ತಿದೆ. ಮಂಡಲ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೂ ಇ-ಖಾತೆ ಮಾಡಲಾಗುತ್ತಿದೆ ಎಂದರು.
ಪರಿಸರ ಸ್ನೇಹಿ ಗಣಪತಿಗಳಿಗೆ ಮಾತ್ರ ಅನುಮತಿ :
ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು. ಪಿ.ಓ.ಪಿ. ಮೂರ್ತಿಗಳ ಮಾರಾಟ, ಸ್ಥಾಪನೆ ನಿಷೇಧ. ನಗರಸಭೆಯ ಅನುಮತಿ ಪಡೆದು ಮಾತ್ರ ಗಣೇಶೋತ್ಸವ ನಡೆಸಬೇಕು. ಮೂರ್ತಿಗಳ ಮಾರಾಟ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಮಾತ್ರ ಅನುಮತಿಸಲಾಗಿದೆ. ವಿಸರ್ಜನೆ ಕೋಲಾರಮ್ಮ ಕೆರೆ ಹಾಗೂ ಇತರೆ ನಿಗದಿತ ಸ್ಥಳಗಳಲ್ಲಿ ಮಾತ್ರ ನಡೆಯಲಿದೆ ಎಂದರು.
ಆ.೧೫ರಿAದ ನಗರಸಭೆ ಹಾಗೂ ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎಂ.ಜಿ.ರಸ್ತೆ, ಅಮ್ಮವಾರಿಪೇಟೆ, ಬಂಬೂ ಬಜಾರ್, ಪ್ರಭಾತ್ ಟಾಕೀಸ್, ಕ್ಲಾಕ್ ಟವರ್, ಬಸ್ ನಿಲ್ದಾಣ, ಮೆಕ್ಕೆ ವೃತ್ತ ಸೇರಿದಂತೆ ಜನದಟ್ಟಣೆ ಇರುವ ರಸ್ತೆಗಳಲ್ಲಿ ಪಾದಚಾರಿ ಮೇಲೆ ಇರುವ ಅಂಗಡಿಗಳು, ಬೀದಿ ವ್ಯಾಪಾರಿಗಳ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಚಿತ್ರ ೧೩ ಕೆ.ಎಲ್.ಆರ್ ೦೩ : ನಗರಸಭೆ ಆಯುಕ್ತ ನವೀನ್‌ಚಂದ್ರ ಭಾವಚಿತ್ರ