ಆಂಜನೇಯ ಸ್ವಾಮಿ ಆರಾಧನೆಯಿಂದ ಸಂಕಷ್ಟ ದೂರ

22sri-1 swamini
ಶೃಂಗೇರಿ ಶ್ರೀ ಚಪ್ಪರದಾಂಜನೇಯ ಸ್ವಾಮಿಗೆ ರಜತದ್ವಾರ ಸಮರ್ಪಿಸಿದ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಶೃಂಗೇರಿ: ಸನಾತನ ಧರ್ಮದಲ್ಲಿ ಭಗವಂತನ ಅನೇಕ ರೂಪಗಳಲ್ಲಿ ಶ್ರೀ ಆಂಜನೇಯ ಸ್ವಾಮಿಯ ಮಹಿಮೆ ಅಪಾರವಾದುದು. ಆಸ್ತಿಕರು ಆಂಜನೇಯ ಸ್ವಾಮಿಯ ಆರಾಧನೆ ಮಾಡಿದರೆ ಲೌಕಿಕ ಜೀವನದಲ್ಲಿ ಎದುರಾಗುವ ಸಂಕಷ್ಟ ದೂರವಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

ಶ್ರೀ ರಾಮಕೃಷ್ಣ ಶಾಸಿ ಸಂತ ಸೇವಾಶ್ರಮ ಧಾರ್ಮಿಕ ಮಹಿಳಾ ಮಂಡಳಿಯಿಂದ ಭಾನುವಾರ ಹಿರಿಯ ಶ್ರೀಗಳ ಸನ್ಯಾಸ ಸ್ವೀಕಾರದ ಸುವರ್ಣಮಹೋತ್ಸವ ಪ್ರಯುಕ್ತ ಶ್ರೀ ಚಪ್ಪರದಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಿರ್ಮಿಸಿದ ರಜತದ್ವಾರವನ್ನು ಸ್ವಾಮಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಉತ್ತಮ ಜೀವನ ನಡೆಸಬೇಕಾದರೆ ನಾವು ಒಳ್ಳೆಯ ಮನಸ್ಸಿನಿಂದ ಸಾಧ್ಯವಾದಷ್ಟು ಅತ್ಯುತ್ತಮ ಕೆಲಸ ಮಾಡಬೇಕು ಎಂದು ಶಾಸದಲ್ಲಿ ಉಲ್ಲೇಖವಿದೆ. ಒಳ್ಳೆಯ ಕೆಲಸ ಮಾಡುವಾಗ ತೊಂದರೆ ಆಗುವ ಸಂದರ್ಭಗಳಲ್ಲಿ ಎದೆಗುಂದದೆ ಹಿಡಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬೇಕೆಂಬ ಸಂದೇಶವನ್ನು ಶ್ರೀ ಆಂಜನೇಯ ಸ್ವಾಮಿ ಚರಿತ್ರೆಯಿಂದ ನಾವು ಅರಿತುಕೊಂಡಿದ್ದೇವೆ. ಯಾವುದೇ ಅಹಂಕಾರವಿಲ್ಲದೆ ಪರಿಶುದ್ಧವಾದ ಮನಸ್ಸಿನಿಂದ ಧಾರ್ಮಿಕ ಸಾಧನೆ ಮಾಡಿದಾಗ ಮಾತ್ರ ಅದು ಭಗವಂತನಿಗೆ ಸಮರ್ಪಿತವಾಗಲು ಸಾಧ್ಯ ಎಂದರು.

ಶ್ರೀ ಚಪ್ಪರದಾಂಜನೇಯ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾವರ್ಧಂತಿ ಪ್ರಯುಕ್ತ ದ್ವಾದಶ ಕಲಶ ಸಂಪ್ರೋಕ್ಷಣೆ, 108 ಪವಮಾನ ಕಲಶ ಅಭಿಷೇಕ, ಲಪಂಚಾಮೃತ ಅಭಿಷೇಕ, ಸಾನ್ನಿಧ್ಯ ಹವನ, ಆದ್ಯಗಣಯಾಗ, ಲಘು ವಿಷ್ಣುಹವನ, ನವಗ್ರಹ ಹವನ, ಸುಂದರಕಾಂಡ ಹವನ ಪ್ರಾರಂಭ, ದುರ್ಗಾ ನಮಸ್ಕಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net