ಅರಮನೆ ಮೈದಾನ ಅಪ್ಪುಮಯ; ಡಾ.ರಾಜ್​ ಕುಟುಂಬದಿಂದ ಬೃಹತ್ ಅನ್ನ ಸಂತರ್ಪಣೆ..

Ullasa 1
Published on
ಅರಮನೆ ಮೈದಾನ ಮಂಗಳವಾರ ಅಕ್ಷರಶಃ ‘ಅಪ್ಪು’ಮಯವಾಗಿತ್ತು. ಡಾ. ರಾಜ್ ಕುಟುಂಬ ಆಯೋಜಿಸಿದ್ದ ಬೃಹತ್ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ‘ಅಭಿಮಾನಿ ದೇವರು’ಗಳು ಭಾಗವಹಿಸಿ, ದುಃಖದಲ್ಲಿಯೇ ಭೋಜನ ಸವಿದು ‘ಪುನೀತ’ರಾದರು. ಅಪ್ಪು ಅಮರ, ಪವರ್​ಸ್ಟಾರ್​ಗೆ ಜೈ ಎಂಬಿತ್ಯಾದಿ ಜೈಕಾರಗಳೂ ಅಲ್ಲಿ ಮೊಳಗುತ್ತಿದ್ದವು. ಮಂಗಳವಾರಕ್ಕೆ ಅಪು್ಪ ಇಲ್ಲವಾಗಿ 12 ದಿನಗಳು ಕಳೆದಿವೆ. ಸೋಮವಾರವಷ್ಟೇ ಕುಟುಂಬದವರೆಲ್ಲ ಸೇರಿ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಗೆ ನೈವೇದ್ಯ ಅರ್ಪಿಸಿ ತಿಥಿ ಕಾರ್ಯ ನೆರವೇರಿಸಿದ್ದಾರೆ. ಆದರೆ, ಅಭಿಮಾನಿಗಳಿಗೆ ಮಾತ್ರ ಪ್ರವೇಶವಿರಲಿಲ್ಲ. ಹಾಗಾಗಿ, ಅಭಿಮಾನಿಗಳಿಗಾಗಿಯೇ ಸದಾಶಿವನಗರದ ಬಳಿಕ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆಯನ್ನು ಡಾ. ರಾಜ್ ಕುಟುಂಬ ಆಯೋಜಿಸಿತ್ತು. ಬರೋಬ್ಬರಿ 30 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸಿ, ನೆಚ್ಚಿನ ನಟನ ನೆನಪಲ್ಲಿ ಊಟ ಸವಿದು ಮರಳಿದರು. ಈ ಅಭಿಮಾನದ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ, ಶ್ರೀಮುರಳಿ, ವಿನಯ್ ರಾಜಕುಮಾರ್, ಯುವ ಸೇರಿ ಇಡೀ ರಾಜ್ ಕುಟುಂಬ ಭಾಗವಹಿಸಿತ್ತು.

ಯಾವೆಲ್ಲ ಅಡುಗೆ ಮಾಡಿಸಲಾಗಿತ್ತು?

ಪುನೀತ್ ತಮ್ಮ ಅಭಿಮಾನಿಗಳಿಗೆ ಅದ್ದೂರಿ ಭೋಜನ ವ್ಯವಸ್ಥೆ ಮಾಡಬೇಕು ಎಂಬ ಆಸೆಯನ್ನು ಈ ಹಿಂದೆ ಹೇಳಿಕೊಂಡಿದ್ದರು. ವಿಪರ್ಯಾಸವೆಂದರೆ ಅದು ತಿಥಿ ಊಟದ ಮೂಲಕ ನೆರವೇರುತ್ತಿದೆ. ಅಪು್ಪ ಮಾಂಸಾಹಾರ ಪ್ರಿಯರಾಗಿದ್ದರಿಂದ, ಅಭಿಮಾನಿಗಳಿಗೂ ಸಸ್ಯಾಹಾರ ಮತ್ತು ಮಾಂಸಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ಗೀ ರೈಸ್, ಸಾರು, ರಸಂ, ಪಲ್ಯ, ಕೋಸಂಬರಿ ಒಂದೆಡೆಯಾದರೆ, ಇತ್ತ ಚಿಕನ್ ಕಬಾಬ್, ಮಟನ್ ಖಾದ್ಯ, ರಾಗಿ ಮುದ್ದೆಯನ್ನೂ ಮಾಡಿಸಲಾಗಿತ್ತು. ಒಟ್ಟು 25 ಸಾವಿರ ಜನರಿಗೆ ಬೇಕಾಗುವಷ್ಟು ಮಾಂಸಾಹಾರ ಮತ್ತು 5 ಸಾವಿರ ಜನರಿಗೆ ಸಾಲುವಷ್ಟು ಸಸ್ಯಾಹಾರದ ಊಟದ ಏರ್ಪಾಟು ಮಾಡಲಾಗಿತ್ತು. ಇದಕ್ಕೆಂದೇ ತ್ರಿಪುರ ವಾಸಿನಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಕುರ್ಚಿಗಳನ್ನು ಹಾಕಲಾಗಿತ್ತು.

ಅಪ್ಪುಗಾಗಿ ಬೆಟ್ಟದ ಹೂ ತಂದ ಅಭಿಮಾನಿ: ಪುನೀತ್ ನಟನೆಯ ‘ಬೆಟ್ಟದ ಹೂವು’ ಸಿನಿಮಾ ಇಂದಿಗೂ ಎಲ್ಲರ ಅಚ್ಚುಮೆಚ್ಚಿನ ಚಿತ್ರ. ಆ ಚಿತ್ರದ ಸನ್ನಿವೇಶವನ್ನು ನೆನಪಿಸುವಂತೆ ಅಭಿಮಾನಿಯೊಬ್ಬರು ಪುನೀತ್​ಗಾಗಿ ‘ಬೆಟ್ಟದ ಹೂವನ್ನೇ’ ತಂದು ಪುನೀತ್ ಸಮಾಧಿಗೆ ಅರ್ಪಿಸಿದರು.

ಟ್ರಾಫಿಕ್ ಟ್ರಾಫಿಕ್: ಸಾವಿರಾರು ಅಭಿಮಾನಿಗಳ ಆಗಮನದ ನಿರೀಕ್ಷೆ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಬಾರದೆಂಬ ಕಾರಣಕ್ಕೆ ಅರಮನೆ ಮೈದಾನವನ್ನು ಸಂರ್ಪಸುವ ಎಲ್ಲ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸಲಾಗಿತ್ತು. ಆದರೆ, ಆ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಬಹುತೇಕ ಎಲ್ಲ ರಸ್ತೆಗಳು ಬಂದ್ ಆಗಿ, ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಬೆಳಗ್ಗೆ 11ರಿಂದ ಸಂಜೆ 6 ಗಂಟೆವರೆಗೂ ಅದು ಮುಂದುವರಿದಿತ್ತು.

ಮೈದಾನದಲ್ಲಿಯೇ ಕೇಶಮುಂಡನ: ಪುನೀತ್ ತಿಥಿ ಕಾರ್ಯದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆಂದೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಒಂದಷ್ಟು ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡು, ಅಭಿಮಾನವನ್ನು ಮೆರೆದರು. ತಲೆಗೂದಲು ಕತ್ತರಿಸಿ, ಅಲ್ಲಿಯೇ ಸ್ನಾನ ಮಾಡಿ ಊಟ ಮಾಡಿದರು. ‘ನಾನು ಪುನೀತ್ ಅಭಿಮಾನಿ. ಅವರನ್ನೇ ತಂದೆ ಎಂದು ನಂಬಿದ್ದೆ. ಇದೀಗ ಅವರೇ ಇಲ್ಲ. ಹಾಗಾಗಿ ಮುಡಿ ಕೊಡುತ್ತಿದ್ದೇನೆ’ ಎನ್ನುತ್ತಾರೆ ಮಧು.

ರೇಣುಕಾಚಾರ್ಯ ಕುಟುಂಬದ 64 ಜನರ ನೇತ್ರದಾನ

ಹೊನ್ನಾಳಿ: ನಟ ಪುನೀತ್ ರಾಜಕುಮಾರ್ ಸಾವಿನ ಬಳಿಕವೂ ನಾಲ್ವರು ಅಂಧರ ಬಾಳಿಗೆ ಬೆಳಕಾದ ಬೆನ್ನಲ್ಲೇ ರಾಜ್ಯಾದ್ಯಂತ ಸ್ವಯಂಪ್ರೇರಿತ ನೇತ್ರ ದಾನಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅಪ್ಪು ಅಭಿಮಾನಿಯಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿ ಅವರ ಕುಟುಂಬದ 64 ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಿದ್ದಾರೆ. ಹೊನ್ನಾಳಿಯಲ್ಲಿ ಸೋಮವಾರ ರಾತ್ರಿ ನಡೆದ ಪುನೀತ್ ನುಡಿ ನಮನ, ಸಂಗೀತ ಕಾರ್ಯಕ್ರಮದ ವೇಳೆ ಅವರು ಹಾಗೂ ಕುಟುಂಬದ ಸದಸ್ಯರು ನೇತ್ರದಾನದ ಅರ್ಜಿಗೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ 500 ಜನ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರೂ ತಮ್ಮ ಕಣ್ಣು ದಾನ ಮಾಡಲು ಒಪ್ಪಿಗೆ ಕೊಟ್ಟರು.

ರೂಬಿಕ್ ಕ್ಯೂಬ್​ನಲ್ಲಿ ಮೂಡಿದ ಪುನೀತ್

ಉಡುಪಿ: ಪುನೀತ್ ರಾಜಕುಮಾರ್ ಅವರಿಗೆ ಮಲ್ಪೆಯ ಕಲಾವಿದ ಮಹೇಶ್ ಮಲ್ಪೆ ವಿಶೇಷ ರೀತಿಯಲ್ಲಿ ಕಲಾನಮನ ಸಲ್ಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮಲ್ಪೆ ಬೀಚ್​ನಲ್ಲಿ ರೂಬಿಕ್ ಕ್ಯೂಬ್ ಬಳಸಿ ಪುನೀತ್ ಕಲಾಕೃತಿ ರಚಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮಹೇಶ್ ಚಿತ್ರ ರಚನೆಗಾಗಿ 3 ದಿನಗಳ ಪೂರ್ವಸಿದ್ಧತೆ ಮಾಡಿದ್ದು, 704 ಕ್ಯೂಬಿಕ್​ಗಳನ್ನು ಬಳಸಿದ್ದಾರೆ. 15 ನಿಮಿಷದಲ್ಲಿ ಕ್ಯೂಬಿಕ್​ಗಳನ್ನು ಜೋಡಿಸಿ ಪುನೀತ್ ಭಾವಚಿತ್ರ ಅನಾವರಣಗೊಳಿಸಿದ್ದಾರೆ.

ಚಿಕ್ಕಮಗಳೂರಿನಿಂದ 3 ಟನ್ ಚಿಕನ್

ಚಿಕ್ಕಮಗಳೂರು: ಪುನೀತ್ ರಾಜಕುಮಾರ್ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಅರಮನೆ ಆವರಣದಲ್ಲಿ ಮಂಗಳವಾರ ಅಪ್ಪು ಅಭಿಮಾನಿಗಳಿಗೆ ಹ್ಮಮಿೊಂಡಿದ್ದ ಅನ್ನಸಂತರ್ಪಣೆಗೆ ಚಿಕ್ಕಮಗಳೂರಿನಿಂದ 3 ಟನ್ ಸ್ಪೆಷಲ್ ಚಿಕನ್ ಪೂರೈಕೆ ಮಾಡಲಾಗಿದೆ. ನಗರದ ಲೈಫ್​ಲೈನ್ ಸಂಸ್ಥೆ ಟೆಂಡರ್ ಚಿಕನ್​ನಿಂದ 3 ಟನ್ ಚಿಕನ್ ಕಳುಹಿಸಿದೆ. ಲಕ್ಷ್ಮಣ್ ಕ್ಯಾಟರರ್ಸ್ ನವರು ಮೂರು ದಿನ ಮುನ್ನವೆ 3 ಟನ್ ಚಿಕನ್ ಆರ್ಡರ್ ಮಾಡಿದ್ದು, ಸೋಮವಾರ ರಾತ್ರಿ ಸಿದ್ಧ್ದಡಿಸಿ ಬೆಂಗಳೂರಿನ ಅರಮನೆ ಮೈದಾನಕ್ಕೆ ಕಳುಹಿಸಲಾಗಿತ್ತು.

30 ಸಾವಿರ ಅಭಿಮಾನಿಗಳಿಗೆ ಅನ್ನಸಂತರ್ಪಣೆ

ಪುನೀತ್ ಅವರ 12ನೇ ದಿನದ ಕಾರ್ಯವನ್ನು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಲಾಗಿತ್ತು. ಅದರಂತೆ ಬೆಳಗ್ಗೆ 12ರಿಂದಲೇ ಊಟದ ವ್ಯವಸ್ಥೆ ಶುರುವಾಗಿತ್ತು. ಸಂಜೆ 5 ಗಂಟೆವರೆಗೂ ನಡೆದ ಅನ್ನಸಂತರ್ಪಣೆಯಲ್ಲಿ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಜನ ಆಗಮಿಸಿ, ಭೋಜನ ಸವಿದರು ಎಂದು ಹೇಳಲಾಗಿದೆ.

ಮದುವೆಗೆ ಅಡುಗೆ ಮಾಡಿದವ್ರೆ

ಅನ್ನ ಸಂತರ್ಪಣೆಯ ಅಡುಗೆ ಮಾಡಿ ಬಡಿಸಿದವರು ಚಾಮರಾಜಪೇಟೆಯ ಡಿಎಲ್​ಎಫ್ ಕ್ಯಾಟ್ರಿಂಗ್​ನವರು. ರಾಜ್ ಕುಟುಂಬದ ಪ್ರತೀ ಕಾರ್ಯಕ್ರಮಕ್ಕೂ ಅವರದ್ದೇ ಅಡುಗೆ. ಪುನೀತ್ ವಿವಾಹ ಸಂದರ್ಭದಲ್ಲೂ ಅವರದ್ದೇ ಅಡುಗೆ ಇತ್ತು. ಈಗ ಪುಣ್ಯಸ್ಮರಣೆಯಲ್ಲಿ ಆಯೋಜಿಸಲಾಗಿದ್ದ ಅನ್ನ ಸಂತರ್ಪಣೆಯಲ್ಲೂ ಡಿಎಲ್​ಎಫ್​ನ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಈ ಪೈಕಿ 700 ಜನ ಅಡುಗೆ ಮಾಡಿ ಬಡಿಸಿದರೆ, ಕ್ಲೀನ್ ಮಾಡುವುದಕ್ಕೆಂದೇ 300 ಜನ ಇದ್ದರು ಎಂದು ಹೇಳಲಾಗುತ್ತದೆ.

ಅಭಿಮಾನಿಗಳಿಗೆ ಊಟ ಬಡಿಸಿದ ಶಿವಣ್ಣ: ಸಮಾಧಿಯಿಂದ ನೇರವಾಗಿ ಅರಮನೆ ಮೈದಾನಕ್ಕೆ ಬಂದಿದ್ದ ಪುನೀತ್ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಊಟ ಬಡಿಸಿದರು. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸಹ ಈ ಕೆಲಸದಲ್ಲಿ ಕೈಜೋಡಿಸಿದರು.

ನಮ್ಮ ನಂತರ ಕೆಲಸ ಮಾತಾಡಬೇಕು

ಈ ಜಾಗದಲ್ಲಿ ಸ್ವರ್ಗ ಕಾಣುತ್ತಿದ್ದೇವೆ. ದೇವರುಗಳು ಸೇರಿ ಈ ಕಾರ್ಯ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. ಅನ್ನದಾನ, ನೇತ್ರದಾನ, ರಕ್ತದಾನ ಮೂರೂ ಒಂದೇ ಕಡೆ ನಡೆಯುತ್ತಿದೆ. ಇದು ಬರೀ ನಮ್ಮಿಂದ ಆಗುತ್ತಿಲ್ಲ. ಅಪು್ಪ ನಮಗೊಂದು ಒಳ್ಳೆಯ ಕೆಲಸ ಬಿಟ್ಟು ಹೋಗಿದ್ದಾರೆ. ಸೇವೆ ಮಾಡುವಾಗ ಕಣ್ಣು, ಕಿವಿ ಮತ್ತು ಬಾಯಿಯನ್ನು ಮುಚ್ಚಿಕೊಂಡಿರಬೇಕು ಎಂದು ಹೇಳಿಕೊಟ್ಟು ಹೋಗಿದ್ದಾರೆ. ಕೆಲಸ ಮಾತ್ರ ಮಾಡಬೇಕು ಮತ್ತು ನಾವು ಹೋದ ಮೇಲೆ ಆ ಕೆಲಸ ಮಾತಾಡಬೇಕು ಎಂದು ಇದರಿಂದ ಗೊತ್ತಾಗುತ್ತದೆ. ನಾನು ಇನ್ನು ಮುಂದೆ ಅದನ್ನು ಪಾಲಿಸಿಕೊಂಡು ಹೋಗುತ್ತೇನೆ ಮತ್ತು ಅಪು್ಪನೇ ನನಗೆ ಶಕ್ತಿ ಕೊಡಬೇಕು. ಈ ಕಾರ್ಯವನ್ನು ಚೆನ್ನಾಗಿ ನಿರ್ವಹಿಸುವುದಕ್ಕೆ ಸಹಕ ರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಬಿಟ್ಟರೆ ತುಂಬಾ ಚಿಕ್ಕ ಮಾತಾಗುತ್ತದೆ. ಖರ್ಚು ಎಷ್ಟು ಬೇಕಾದರೂ ಮಾಡಬಹುದು. ಆದರೆ, ಎಲ್ಲರ ಸಹಕಾರ ವಿಲ್ಲದಿದ್ದರೆ, ಇಂಥ ಕಾರ್ಯಕ್ರಮವನ್ನು ಮಾಡುವುದಕ್ಕೆ ಸಾಧ್ಯವಿರಲಿಲ್ಲ.

| ರಾಘವೇಂದ್ರ ರಾಜಕುಮಾರ್

ಕೆರೆಯ ನೀರನು ಕೆರೆಗೆ ಚೆಲ್ಲಿ

ಇಷ್ಟೊಂದು ಜನರಿಗೆ ಅನ್ನ ಸಂತರ್ಪಣೆ ಮಾಡಿದ್ದು ಖುಷಿ ಇದೆ. ಆದರೆ, ಈ ರೀತಿ ಮಾಡಬೇಕಾಯಿತಲ್ಲ ಎಂಬ ನೋವಿದೆ. ಅವನ ಆಸೆ ಈ ರೀತಿ ನೆರವೇರಬೇಕು ಎಂಬುದು ದೇವರ ಇಚ್ಛೆಯೋ ಏನೋ. ನಾವು ಹೀಗಿರುವುದಕ್ಕೆ ಅಭಿಮಾನಿಗಳೇ ಕಾರಣ. ಅವರ ಪ್ರೀತಿ ಇಲ್ಲದಿದ್ದರೆ ಅಪ್ಪಾಜಿ, ನಾನು, ಅಪು್ಪ ಯಾರೂ ಬರುವುದಕ್ಕೆ ಸಾಧ್ಯವಿಲ್ಲ. ಅವರಿಂದ ಏನು ಪಡೆದಿದ್ದೇವೋ, ಅದನ್ನು ಅವರಿಗೇ ಕೊಡುತ್ತಿದ್ದೇವೆ ಅಷ್ಟೇ. ನಾವು ಮಾಡಿದ್ದು ಅಂತ ಏನೂ ಇಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲಿ ಅಂತಾರಲ್ಲ, ಹಾಗೆಯೇ ಇದು ಪರಸ್ಪರ. ಪುನೀತ್ ಇಷ್ಟೆಲ್ಲ ಸಹಾಯ ಮಾಡಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ನಾವು ಈ ವಿಷಯ ಮಾತಾಡಿರಲಿಲ್ಲ. ನಾವೇನಿದ್ದರೂ ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಮಾತಾಡುತ್ತಿದ್ದೆವೇ ಹೊರತು, ಆತ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಎಂದೂ ಮಾತಾಡಿರಲಿಲ್ಲ. ಮನೆಯ ಸದಸ್ಯನಿಗೇ ಗೊತ್ತಿಲ್ಲ ಎಂದರೆ, ಅಪು್ಪ ಅದೆಷ್ಟು ರಹಸ್ಯವಾಗಿ ಸಹಾಯ ಮಾಡಿರ ಬಹುದು ಎಂದು ಗೊತ್ತಾಗುತ್ತದೆ. ಇದರಿಂದ ನಿಜಕ್ಕೂ ಹೆಮ್ಮೆ ಆಗುತ್ತದೆ. ಅಂತಹ ತಮ್ಮನನ್ನು ಪಡೆ ಯುವುದಕ್ಕೆ ನಾನು ಬಹಳ ಪುಣ್ಯ ಮಾಡಿದ್ದೆ.

| ಶಿವರಾಜ ಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net