ಅಮೆರಿಕದ ಹಸ್ತಕ್ಷೇಪಕ್ಕೆ ಸಾಕ್ಷ್ಯಾಧಾರ ಇಲ್ಲವೆಂದ ಸೇನೆ; ಪಾಕ್​ನಲ್ಲಿ ರಾಜಕೀಯ ತಲ್ಲಣ

Pak
ಪಿಟಿಐ ಪಕ್ಷದ ಬೆಂಬಲಿಗರಿಂದ ಇಮ್ರಾನ್ ಖಾನ್ ಬೆಂಬಲಿಸಿ ರ‍್ಯಾಲಿ
Published on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ತಾಂತ್ರಿಕವಾಗಿ ಬಹುಮತ ಕಳೆದುಕೊಂಡ ನಂತರ ನಡೆದ ವಿದ್ಯಮಾನಗಳು ರಾಜಕೀಯ ತಲ್ಲಣವನ್ನು ಹೆಚ್ಚಿಸಿದೆ. ಸರ್ಕಾರ ಉರುಳಿಸುವಲ್ಲಿ ಅಮೆರಿಕದ ಕೈವಾಡಕ್ಕೆ ಸಾಕ್ಷ್ಯ ಇಲ್ಲ ಎಂದು ಸೇನೆ ಹೇಳಿದೆ. ಐಎಂಎಫ್​ನ 600 ಕೋಟಿ ಡಾಲರ್ ನೆರವಿನಗೆ ತಡೆ, ಎನ್​ಎಸ್​ಎ ಸ್ಥಾನಕ್ಕೆ ಮೊಯೀದ್ ಯೂಸುಫ್ ರಾಜೀನಾಮೆ ಸೇರಿ ಹಲವು ವಿದ್ಯಮಾನಗಳು ಇದಕ್ಕೆ ಕಾರಣ. ಈ ಮಧ್ಯೆ, 90 ದಿನದಲ್ಲಿ ಚುನಾವಣೆ ನಡೆಸುವುದು ಕಷ್ಟ ಎಂದು ಚುನಾವಣಾ ಆಯೋಗ ಹೇಳಿದ್ದರೆ, ಅವಿಶ್ವಾಸ ಗೊತ್ತುವಳಿ ತಿರಸ್ಕೃತವಾಗಿದ್ದನ್ನು ಪ್ರಶ್ನಿಸಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಸಂಸತ್ ದಾಖಲೆ ಕೇಳಿದ ಕೋರ್ಟ್: ಇಮ್ರಾನ್ ಖಾನ್ ವಿರುದ್ಧ ಸಲ್ಲಿಕೆಯಾಗಿದ್ದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿ ನ್ಯಾಷನಲ್ ಅಸೆಂಬ್ಲಿಯಲ್ಲಿ ನಡೆಸಲಾದ ಕಲಾಪದ ವಿವರವನ್ನು ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ದೇಶದ ರಾಜಕೀಯ ಅಸ್ಥಿರತೆಯನ್ನು ಗಮನಿಸಿದ ಸುಪ್ರೀಂಕೋರ್ಟ್ ಈ ಕೇಸನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಲ್ ನೇತೃತ್ವದ ಪಂಚ ಸದಸ್ಯರ ಪೀಠ ಇದರ ವಿಚಾರಣೆ ನಡೆಸುತ್ತಿದೆ.

ಇಮ್ರಾನ್​ಗೆ ವ್ಯತಿರಿಕ್ತವಾದ ಸೇನೆ: ಸರ್ಕಾರ ಪತನಕ್ಕೆ ಅಮೆರಿಕ ಕಾರಣ ಎಂದು ಇಮ್ರಾನ್ ಖಾನ್ ಆರೋಪಿಸುತ್ತಿದ್ದಾರೆ. ಪಾಕಿಸ್ತಾನದ ಆಂತರಿಕ ರಾಜಕೀಯದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿರುವ ಸಾಧ್ಯತೆ ಇಲ್ಲ ಎಂದು ಸೇನೆ ಹೇಳಿದೆ. ಪಾಕಿಸ್ತಾನದಲ್ಲಿರುವ ಅಮರಿಕ ವಿರೋಧಿ ಭಾವನೆಯನ್ನು ಬಳಸಿಕೊಳ್ಳಲು ಇಮ್ರಾನ್ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಾದೇಶಿಕ ರಾಜಕೀಯ ಪರಿಣತರಾಗಿರುವ ಲಿಸಾ ಕರ್ಟಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಕಾಲಿಕ ಕನಿಷ್ಠಕ್ಕೆ ಪಾಕ್ ಕರೆನ್ಸಿ: ಇಂಟರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಂಗಳವಾರದ ವಹಿವಾಟಿನಲ್ಲಿ 185 ರೂಪಾಯಿ ಗಡಿ ಮೀರಿ ಪತನಕಂಡಿದೆ.

ಚುನಾವಣೆಗೆ ಬೇಕು 6 ತಿಂಗಳು: ಮೂರು ತಿಂಗಳ ಒಳಗೆ ಸಾರ್ವತ್ರಿಕ ಚುನಾವಣೆ ನಡೆಸುವುದು ಕಷ್ಟಸಾಧ್ಯ. ಇದಕ್ಕೆ ಪ್ರಮುಖವಾಗಿ ಕಾನೂನು ಅಡ್ಡಿ ಆಗುತ್ತದೆ. ಹಾಗೆಯೇ, ವ್ಯವಸ್ಥೆ ಮಾಡಿಕೊಳ್ಳಲು ಸಮಯಾವಕಾಶದ ಕೊರತೆಯೂ ಇದೆ. ಹೀಗಾಗಿ ಕನಿಷ್ಠ ಆರು ತಿಂಗಳ ಕಾಲಾವಕಾಶ ಇಲ್ಲದೇ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗದು ಎಂದು ಎಲೆಕ್ಷನ್ ಕಮಿಷನ್ ಆಫ್ ಪಾಕಿಸ್ತಾನ (ಇಸಿಪಿ)ದ ಅಧಿಕಾರಿಯೊಬ್ಬರು ಹೇಳಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಆದರೆ, ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಸುವುದು ಅನಿವಾರ್ಯವಾದರೆ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಸಿದ್ಧ ಎಂದು ಅಧಿಕಾರಿಯ ಹೇಳಿಕೆಗೆ ವ್ಯತಿರಿಕ್ತವಾಗಿ ಇಸಿಪಿ ತಿಳಿಸಿದೆ.

ಇಮ್ರಾನ್ ಪತ್ನಿಯ ಗೆಳತಿ ಪಲಾಯನ: ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿ ಅವರ ಆಪ್ತ ಗೆಳತಿ ಫರಾ ಖಾನ್ ವಿರುದ್ಧ ಅಧಿಕಾರಿಗಳ ವರ್ಗಾವಣೆಯಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಲಂಚ ಸ್ವೀಕರಿಸಿದ ಆರೋಪ ಎದುರಾಗಿದೆ. ಬಂಧನ ಭೀತಿಗೆ ಒಳಗಾಗಿರುವ ಫರಾಹ್ ದುಬೈಗೆ ಪಲಾಯನಗೈದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರ ಪತಿ ಅಹ್ಸಾನ್ ಜಮಿಲ್ ಗುಜ್ಜಾರ್ ಈಗಾಗಲೇ ಅಮೆರಿಕಕ್ಕೆ ಹೋಗಿದ್ದಾರೆ.

ಎನ್​ಎಸ್​ಎ ರಾಜೀನಾಮೆ: ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಸ್ಥಾನಕ್ಕೆ ಮೊಯೀದ್ ಯೂಸುಫ್ ಸ್ಙೋಮವಾರ ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಟ್ವೀಟ್ ಮೂಲಕ ಖಚಿತಪಡಿಸಿದ ಯೂಸುಫ್, ಬಹಳ ಕಾರ್ಯ ಸಂತೃಪ್ತಿಯೊಂದಿಗೆ ನಾನು ಈ ಹೊಣೆಗಾರಿಕೆಯಿಂದ ಮುಕ್ತನಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಅಮೆರಿಕ ವಿರೋಧಿ ಅಲ್ಲ. ಆದಾಗ್ಯೂ, ನಮಗೆ ನಮ್ಮದೇ ಆದ ನೀತಿಗಳಿರುತ್ತವೆ. ಅದನ್ನು ಅನುಸರಿಸುವಾಗ ಅಲ್ಲಿ ಹಸ್ತಕ್ಷೇಪಗಳು ಇರಬಾರದು. ಪರಸ್ಪರ ಗೌರವಿಸಿಕೊಂಡು ಸ್ನೇಹ ಸಂಬಂಧಗಳನ್ನು ನಿಭಾಯಿಸಬೇಕು. ಅಮೆರಿಕದ ಜತೆಗೆ ಪಾಕಿಸ್ತಾನದ ಸ್ನೇಹ ಸಂಬಂಧ ಇನ್ನಷ್ಟು ಬಲಿಷ್ಠಗೊಳ್ಳಬೇಕು. | ಇಮ್ರಾನ್ ಖಾನ್ ಪಾಕ್ ಪ್ರಧಾನಿ

ಹಂಗಾಮಿ ಪ್ರಧಾನಿ ಸ್ಥಾನದ ಸುತ್ತಮುತ್ತ: ಪಾಕಿಸ್ತಾನದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಮಂತ್ರಿಯನ್ನಾಗಿ ಇಮ್ರಾನ್ ಖಾನ್ ಸರ್ಕಾರ ನಾಮನಿರ್ದೇಶನ ಮಾಡಿದೆ. ಈ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಪಿಟಿಐ ಸರ್ಕಾರ ಮತ್ತು ಡೆಪ್ಯೂಟಿ ಸ್ಪೀಕರ್ ನಡೆಯನ್ನು ಸಮರ್ಥಿಸಿಕೊಂಡಂತೆ ಆಗುವುದು ಎಂದು ಸಿಂಧ್ ಹೈಕೋರ್ಟ್​ನ ಬಾರ್ ಅಸೋಸಿಯೇಷನ್ ಒತ್ತಾಯಿಸಿದೆ.

ಅಮೆರಿಕದ್ದೇ ಹಸ್ತಕ್ಷೇಪ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕದ ಹಿತ ಕಡೆಗಣಿಸಿ ಫೆಬ್ರವರಿ 23-24ರಂದು ಮಾಸ್ಕೊಗೆ ಆಗಮಿಸಿದ್ದರು. ಅವಿಧೇಯವಾಗಿ ವರ್ತಿಸಿದ ಖಾನ್ ವಿರುದ್ಧ ಅಮೆರಿಕ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಅದು ಆಂತರಿಕವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಖಾನ್​ಗೆ ಪಾಠಕಲಿಸಲು ಹೊರಟಿದೆ. ಇದು ನಾಚಿಗೇಡಿನ ಸಂಗತಿ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝುಕರೋವಾ ಟೀಕಿಸಿದ್ದಾರೆ.

ಐಎಂಎಫ್ ನಿಧಿಗೆ ತಡೆ: ಪಾಕಿಸ್ತಾನದ ಆರ್ಥಿಕ ವ್ಯವಸ್ಥೆ ಸುಧಾರಿಸುವು ದಕ್ಕಾಗಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಅನುಮೋದಿಸಿದ್ದ 600 ಕೋಟಿ ಡಾಲರ್ ನೆರವಿನ ಯೋಜನೆಯನ್ನು ರಾಜಕೀಯ ಅಸ್ಥಿರತೆ ಕಾರಣ ತಡೆಹಿಡಿಯಲಾಗಿದೆ. ಜೂನ್ ತನಕದ ನಿರ್ವಹಣೆಗೆ 500 ಕೋಟಿ ಡಾಲರ್ ಅನ್ನು ಪಾಕ್ ಸರ್ಕಾರ ನಿರ್ವಹಿಸಬೇಕಾಗಿದೆ. ಪಾವತಿ ಬಿಕ್ಕಟ್ಟಿನಿಂದ ಹೊರಬರಲು ಈಗ ಪಾಕ್ ಇನ್ನಷ್ಟು ಸವಾಲು ಎದುರಿಸಬೇಕಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net