ಅಪರಾಧ ಹೆಚ್ಚಾದರೆ ಸಮಾಜದ ಸ್ವಾಸ್ಥೃ ಹಾಳು

31.Pyp. 01
Published on

ಪಿರಿಯಾಪಟ್ಟಣ: ಅಪರಾಧಗಳು ಹೆಚ್ಚಾದಲ್ಲಿ ಸಮಾಜದ ಸ್ವಾಸ್ಥೃ ಹದಗೆಡಲಿದೆ ಎಂದು ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಕಳ್ಳ ಸಾಗನೆ ಅತ್ಯಂತ ಹೀನ ಕೃತ್ಯವಾಗಿದ್ದು, ಅದನ್ನು ತಡೆಯಲು ನಾವೆಲ್ಲರೂ ಕಾನೂನನ್ನು ಅರಿತು ಕಟಿಬದ್ಧರಾಗಿರಬೇಕು ಎಂದರು. ಮೋಸದಿಂದ ಒಬ್ಬ ವ್ಯಕ್ತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅನುಮತಿ ಇಲ್ಲದೆ ಸ್ಥಳಾಂತರಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದ್ದು, ನೀವು ವಾಸಿಸುವ ಪ್ರದೇಶಗಳಲ್ಲಿ ಮಾನವ ಕಳ್ಳ ಸಾಗನೆ ಸಂಬಂಧಪಟ್ಟಂತೆ ಚಟುವಟಿಕೆ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ನೀಡಿದರೆ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಟ್ಟು ಆ ಕೃತ್ಯಕ್ಕೆ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

ತಂತ್ರಜ್ಞಾನದ ಬೆಳವಣಿಗೆಗಳಿಂದ ನಮಗೆ ಹೆಚ್ಚಿನ ಅನುಕೂಲಗಳಾಗುತ್ತವೆ, ಆದರೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ ಎಂದರು. ಸಮಾಜ ಸುಧಾರಣೆಯಾಗಬೇಕಾದರೆ ಸಂವಿಧಾನದ ಔಚಿತ್ಯವನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಕುತೂಹಲಕ್ಕಾಗಿ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ಹದಿಹರೆಯದಲ್ಲಿ ವಿದ್ಯಾರ್ಥಿಗಳು ಕಾಲ್ಪನಿಕತೆಯ ಚಂಚಲತೆಗೆ ಒಳಗಾಗದೆ ನಿರ್ದಿಷ್ಟವಾದ ಗುರಿಯೊಂದಿಗೆ ಓದಿನೆಡೆಗೆ ಗಮನಹರಿಸಬೇಕು ಎಂದರು. ವಿದ್ಯಾರ್ಥಿ ಜೀವನವೆಂಬುದು ಅತ್ಯಮೂಲ್ಯವಾದ ಸಮಯವಾಗಿದ್ದು, ಈ ಅವಧಿಯನ್ನು ನಿಮ್ಮ ಜೀವನದ ಗುರಿಯನ್ನು ತಲುಪಿಸುವ ಪ್ರಮುಖ ಘಟ್ಟವಾಗಿದೆ ಎಂದರು.

ತಹಸಿಲ್ದಾರ್ ನಿಸರ್ಗಪ್ರಿಯಾ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರವಿ ಮಾತನಾಡಿದರು.

ವಕೀಲ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಸಹಾಯಕ ಸರ್ಕಾರಿ ಅಭಿಯೋಜಕ ಆರ್.ಕೆ.ಶ್ರೀನಾಥ್, ಸಿಪಿಐ ಗೋವಿಂದರಾಜು, ಎಎಸ್‌ಐ ಎ.ಆರ್.ಸುರೇಶ್, ಉಪನ್ಯಾಸಕರಾದ ಕವನಾ, ತೇಜಸ್ವಿನಿ, ದಾಕ್ಷಾಯಿಣಿ, ಮಂಜು, ಪ್ರಿಯಾ, ವರಲಕ್ಷ್ಮೀ, ಪವನ್, ಮಿಥುನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net