ಅನ್ವರ್ ಮಾನಪ್ಪಾಡಿ ಲಂಚದ ಆರೋಪ / ಇಡಿ ಮತ್ತು ಸಿಬಿಐ ತನಿಖೆ ಆಗಬೇಕು / ಸಚಿವ ಕೃಷ್ಣೇಬೈರೇಗೌಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ವಕ್ಫ್ಬೋರ್ಡ್ ವಿಚಾರವಾಗಿ ಬಿಜೆಪಿ ನಾಯಕ ಅನ್ವರ್ ಮಾನಪ್ಪಾಡಿ ಮಾಡಿರುವ ೧೫೦ ಕೋಟಿ ರೂ.ಗಳು ಲಂಚದ ಆರೋಪವನ್ನು ಇಡಿ ಮತ್ತು ಸಿಬಿಐ ಗೆ ವಹಿಸಲಿ, ಕಾಂಗ್ರೇಸ್‌ಗೆ ಮಾತ್ರ ಇಡಿ ಸಿಬಿಐ ಇರುವುದಾ ಎಂದು ಕಂದಾಯ ಸಚಿವ ಕೃಷ್ಠೇಬೈರೇಗೌಡ ವಾಗ್ವಾದ ನಡೆಸಿದರು.

ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿ.ವೆಂಕಟಮುನಿಯಪ್ಪನವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯ ಅನ್ವರ್ ಮಾನಪ್ಪಾಡಿ ಯವರ ಲಂಚದ ಆರೋಪವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಒತ್ತಡ ಹೇರಿ, ಬಾಯಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಆರೋಪ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅಲ್ಲ ಬಿಜೆಪಿಯ ಓರ್ವ ಪ್ರಮುಖ ನಾಯಕ ಅನ್ವರ್ ಮಾನಪ್ಪಾಡಿ.

ಪ್ರತಿದಿನ ಸುಳ್ಳು ಆರೋಪಗಳಿಗೆಲ್ಲಾ ಇಡಿ ಮತ್ತು ಸಿಬಿಐ ನೋಟೀಸು ನೀಡುತ್ತಾರೆ. ಸಿಬಿಐಗೆ ಸಂವಿಧಾನಿಕ ಜವಾಬ್ದಾರಿ ಇದ್ದರೆ ಅನ್ವರ್ ಮಾನಪ್ಪಾಡಿ ಲಂಚದ ಆರೋಪವನ್ನು ತನಿಖೆ ಮಾಡಬೇಕು. ಆಗ ಸತ್ಯಸತ್ಯತೆ ಹೊರ ಬರುತ್ತದೆ ಎಂದರು.

ಅದಾನಿ ಮೇಲೆ ೨೫೦೦ ಸಾವಿರ ಕೋಟಿ ಲಂಚದ ಆರೋಪ ಅಮೇರಿಕದಲ್ಲಿ ಎಫ್.ಐ.ಆರ್. ಆಗಿದೆ. ಈ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಏನು ಮಾಡುತ್ತಿದೆ. ನಾಟಕ ಮಾಡುತ್ತಿದ್ದಾರೆ ಅಷ್ಟೇ ಎಂದು ಆರೋಪಿಸಿದರು.

ಕೋವಿಡ್ ಹಗರಣವನ್ನು ತನಿಖೆ ನಡೆಸಲಾಗುತ್ತಿರುವುದರ ಬಗ್ಗೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಕೃಷ್ಣಬೈರೇಗೌಡ ಹೆಣದಲ್ಲಿ ಹಣ ಮಾಡಿರುವುದನ್ನು ಮರೆಯಬೇಕಾ? ಕಳಪೆ ಸಾಮಗ್ರಿ ಟೆಸ್ಟಿಂಗ್ ನಲ್ಲಿ ಡಬಲ್ ದುಡ್ಡು ಮಾಡಿದ್ದು, ಸಾವಿನಲ್ಲಿಯೂ ಹಣ ಮಾಡಿದ ಸಂಸ್ಕೃತಿಯನ್ನು ಬಿಟ್ಟು ಬಿಡಬೇಕಾ ಎಂದರಲ್ಲದೆ ನ್ಯಾಯಾಂಗ ತನಿಖೆಯ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಿಂದೂ ಧರ್ಮದ ಹೆಸರಿನಲ್ಲಿ ಓಟು ಹಾಕಿಸಿಕೊಳ್ಳುವ ಬಿಜೆಪಿಯವರು ಮಾರಕ ಖಾಯಿಲೆ ದೇಶ ಮತ್ತು ಪ್ರಪಂಚವನ್ನು ಬುಡಮೇಲು ಮಾಡುವಾಗ ಅದರಲ್ಲೂ ದುಡ್ಡು ಮಾಡಿದ ಖ್ಯಾತಿ ಬಿಜೆಪಿಯವರಿಗೆ ಸಲ್ಲಬೇಕು. ಇದು ಯಾವ ಮಾನವೀಯ ಧರ್ಮ. ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಲ್ಲವೇ ಸತ್ಯ ಸಂಗತಿ ಹೊರಬರಬೇಕೆಂದರೆ ತನಿಖೆಯಾಗಲೇಬೇಕು ಎಂದರು.

ಕೋವಿಡ್‌ನ ಸಾವಿನಲ್ಲೂ ದುಡ್ಡು ಮಾಡಿದ್ದು, ಜಗದೀಶ್ ಶೆಟ್ಟರ್‌ಗೆ ಮತ್ತು ಬಿಜೆಪಿಗೆ ತಪ್ಪು ಎನಿಸಲಿಲ್ಲವೇ? ಯಾರೂ ಸಾಚಾಗಳಲ್ಲ, ಯಾರೂ ದುಡ್ಡು ಮಾಡಲ್ಲ ಎಂದಲ್ಲ. ಮಾನವೀಯತೆ ಇಲ್ಲದೆ ದುಡ್ಡು ಮಾಡಿದವರು ರಾಕ್ಷಸ ಪ್ರವೃತ್ತಿಗೆ ಸೇರಿದವರಾಗಿದ್ದಾರೆ. ಇದು ತನಿಖೆ ಆಗಲೇಬೇಕಾಗಿದೆ ಎಂದು ಪ್ರತಿಪಾದಿಸಿದರು.

ಚಿತ್ರ ೧೫ ಕೆ.ಎಲ್.ಆರ್. ೦೧ : ಕೃಷ್ಣೇಬೈರೇಗೌಡ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net