ಅನ್ನದಾತನ ಬದುಕು ಹಸನಾದರೆ ಸುಖಿರಾಜ್ಯ: ವಿಜಯವಾಣಿ ಕ್ಲಬ್​ನಲ್ಲಿ ಸಂವಾದ

CH Agri
Published on
ಅನ್ನದಾತ ಸುಖೀಭವ ಶೀರ್ಷಿಕೆಯಡಿ ‘ವಿಜಯವಾಣಿ, ದಿಗ್ವಿಜಯ 247 ನ್ಯೂಸ್’ ಆಯೋಜಿಸಿದ್ದ ‘ಕ್ಲಬ್​ಹೌಸ್ ಸಂವಾದ’ ವ್ಯವಸಾಯದ ಕಷ್ಟ, ಕೃಷಿಕರ ಸಮಸ್ಯೆ, ಅದಕ್ಕಿರುವ ಪರಿಹಾರ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲಿತು. ಸಮಗ್ರ ಕೃಷಿ ನೀತಿ, ಪಡಿತರಕ್ಕೆ ಸ್ಥಳೀಯ ಬೆಳೆಗಳ ಪೂರೈಕೆ ಹಾಗೂ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು. ಹೊಸ ಆಲೋಚನೆಯೊಂದಿಗೆ ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪ್ರಯತ್ನಗಳೇನಿರಬೇಕು ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

| ಹನುಮನಗೌಡ ಬೆಳಗುರ್ಕಿ ಅಧ್ಯಕ್ಷ, ರಾಜ್ಯ ಕೃಷಿ ಬೆಲೆ ಆಯೋಗ

ಬೆಳೆ ಮತ್ತು ಬೆಲೆ ಗಂಡಾಂತರದಿಂದ ಅನ್ನದಾತರನ್ನು ಪಾರು ಮಾಡಿ ಬದುಕು ಹಸನಾಗಿಸುವುದು ಸರ್ಕಾರಕ್ಕೆ ಮಾತ್ರವಲ್ಲ, ರೈತ ಸಮುದಾಯದ ಮುಂದಿರುವ ದೊಡ್ಡ ಸವಾಲು ಕೂಡ. ಸರ್ಕಾರಕ್ಕೆ ಶಿಫಾರಸು ಸಹಿತ ರಾಜ್ಯ ಕೃಷಿ ಬೆಲೆ ಆಯೋಗ ಸಲ್ಲಿಸಿದ ವರದಿಯು ಸರ್ಕಾರದ ನೀತಿ-ನಿರ್ಧಾರಗಳ ಬದಲಾವಣೆ ಜತೆಗೆ ರೈತರ ಲೆಕ್ಕವಿಟ್ಟು ಬೆಳೆಯುವ ಪರಿಪಾಠ ರೂಢಿಸಿಕೊಳ್ಳಬೇಕಾದ ಅಗತ್ಯತೆ ಸಾರಿದೆ. ಐದು ವಿವಿಗಳ ಜತೆಗೆ ವಿಚಾರ ವಿಮರ್ಶೆ, 2,000 ರೈತರ ಅಭಿಪ್ರಾಯ ಹಾಗೂ 27 ಬೆಳೆಗಳಿಗೆ ದತ್ತಾಂಶ ಸಂಗ್ರಹಿಸಿ, ಹೊಸ ಆಲೋಚನೆಯೊಂದಿಗೆ ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪ್ರಯತ್ನಗಳೇನಿರಬೇಕು ಎಂದು ತಿಳಿಸಿದೆ. ಹಾಗೆಯೇ ‘ನಮ್ಮದೇ ಮಾರುಕಟ್ಟೆ’ ಕಾರ್ಯತಂತ್ರವನ್ನು ರೈತರು ಅನುಸರಿಸಿ ಸ್ವಾವಲಂಬಿ, ಘನತೆ-ಗೌರವದ ಬದುಕು ಕಟ್ಟಿಕೊಳ್ಳುವುದಕ್ಕೂ ಸಾಧ್ಯವಿದೆ ಎಂಬ ಕಾರ್ಯಸಾಧು ಸೂತ್ರಗಳನ್ನು ರೂಪಿಸಿ ಕೊಟ್ಟಿದೆ. ಬೆಲೆ ಖಾತರಿ, ಸಮಗ್ರ ಕೃಷಿ ಪದ್ಧತಿಗೆ ಒತ್ತು, ಎಲ್ಲ ಬೆಳೆಗಳಿಗೆ ವಿಮೆ ವಿಸ್ತರಿಸಿ ಕಡ್ಡಾಯಗೊಳಿಸುವುದು, ಬೆಳೆ ವಿಮೆ ಯೋಜನೆ ಅನುಷ್ಠಾನ ಹಂತದಲ್ಲಿನ ಲೋಪ-ದೋಷ ನಿವಾರಣೆ, ಮಾರ್ಗಸೂಚಿ ಪರಿಷ್ಕರಣೆ, ಬೆಲೆ ಮುನ್ನಂದಾಜು ಮಾಹಿತಿ ನೀಡಿ ರೈತರಲ್ಲಿ ಜಾಗೃತಿ, ಕೃಷಿ ಯಂತ್ರೋಪಕರಗಳ ಸಬ್ಸಿಡಿ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ವಿಸ್ತರಣೆ, ಬೇಡಿಕೆ ಹಾಗೂ ಪೂರೈಕೆ ನಡುವಿನ ವ್ಯತ್ಯಾಸ ಸರಿದೂಗಿಸುವುದು ಮುಂತಾದ ಪರಿಹಾರ ಸೂತ್ರಗಳು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿದೆ.

ಗ್ರಾಮೀಣ ಜಲ ಸಂವರ್ಧನಾ ಯೋಜನೆ

ಹೊಲದಲ್ಲಿ ಬೀಳುವ ಪ್ರತಿ ಮಳೆ ಹನಿ ಸಂರಕ್ಷಣೆ ಹಾಗೂ ಸದ್ಬಳಕೆಗೆ ‘ಹೊಲಕ್ಕೊಂದು ಕೆರೆ’ ಗ್ರಾಮೀಣ ಜಲ ಸಂವರ್ಧನಾ ಯೋಜನೆಗೆ ಒತ್ತಾಸೆಯಾಗಿದೆ. ಒಂದು ಟಿಎಂಸಿ ಅಡಿ ನೀರು ಸಂಗ್ರಹಿಸುವ ಅಣೆಕಟ್ಟೆ ನಿರ್ವಣಕ್ಕೆ 300ರಿಂದ 400 ಕೋಟಿ ರೂ. ವೆಚ್ಚವಾಗುತ್ತದೆ. ಅದೇ ಸಣ್ಣ ರೈತನ 4 ಎಕರೆ ಜಮೀನಿನಲ್ಲಿ ಶೇ.10 ಬಳಸಿ 100 ಅಡಿ ಉದ್ದ ಹಾಗೂ ಅಗಲ, 20 ಅಡಿ ಆಳದ ಕೆರೆ ನಿರ್ವಿುಸಿದರೆ, 2 ಲಕ್ಷ ಘನ ಅಡಿ ನೀರು ಸಂಗ್ರಹಿಸಬಹುದಾಗಿದ್ದು, 3-4 ಲಕ್ಷ ರೂ. ಖರ್ಚಾಗುತ್ತದೆ. ಸಣ್ಣ ರೈತರಿಗೆ ಶೇ.50, ಇತರರಿಗೆ ಶೇ.25 ಸಬ್ಸಿಡಿ ನೀಡಿ ಜಲಕ್ರಾಂತಿ ಮಾಡಬಹುದಾಗಿದೆ. ನೀತಿ ಆಯೋಗವೂ ಇದನ್ನೇ ಹೇಳಿದೆ ಎಂದು ಹನುಮನಗೌಡ ಬೆಳಗುರ್ಕಿ ಹೇಳಿದರು.

ರೈತರ ಬದುಕು ಸುಧಾರಣೆಗೆ ಈ ಹಿಂದೆಯೂ ಆಯೋಗ ಅನೇಕ ಶಿಫಾರಸುಗಳನ್ನು ಮಾಡಿದ್ದು, ಅವೆಲ್ಲ ಕಸದ ಬುಟ್ಟಿ ಸೇರಿದವೇ?

ಹನುಮನಗೌಡ: ಹಾಗೇನಿಲ್ಲ, ಸ್ಥಳೀಯ ಆಹಾರಧಾನ್ಯ ಖರೀದಿ (ಪ್ರಸಕ್ತ 4.70 ಲಕ್ಷ ಟನ್ ರಾಗಿ ಖರೀದಿ, 80,000 ಟನ್ ಜೋಳ, ಭತ್ತ ಎರಡು ಲಕ್ಷ ಟನ್) ಜಾರಿಗೆ ಬಂದಿದೆ. ಅಡಮಾನ ಸಾಲದ ವ್ಯವಸ್ಥೆ ಬದಲಾವಣೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರೈತರ ಒತ್ತಡ ಹಾಗೂ ವಿಧಾನಮಂಡಲದಲ್ಲಿ ಚರ್ಚೆಯೂ ಮುಖ್ಯ.

1-2 ಎಕರೆಯಿರುವ ಸಣ್ಣ ರೈತರಿಗೆ ಕೆರೆ ನಿರ್ಮಾಣ ಸಾಧ್ಯವೇ?

ಹನುಮನಗೌಡ: ಕೆರೆ ನಿರ್ವಣಕ್ಕೆ 4 ಎಕರೆಯಲ್ಲಿ ಕಾಲು ಎಕರೆ ಬೇಕು. 1-2 ಎಕರೆಯಿದ್ದರೆ ಕಷ್ಟ. ಬಯಲು ಸೀಮೆಯಲ್ಲಿ 30 ದಿನಗಳ ಮಳೆ ನೀರು ಹಿಡಿದಿಡಲು ಪ್ರಯತ್ನಿಸಲಾಗುತ್ತಿದೆ.

ಬೆಳೆ ವಿಮೆ ಕಂತು ಕಟ್ಟಿದ ರೈತರಿಗೆ ಪರಿಹಾರ ಸಿಗುತ್ತಿಲ್ಲ, ವಿಳಂಬವಾಗುತ್ತಿದೆಯಲ್ಲ..

ಹನುಮನಗೌಡ: ಅಪ್ಪಟ ಸತ್ಯ, ಅನುಷ್ಠಾನ ದೋಷಗಳಿವೆ. 3-4 ಕಾರ್ಯಾಗಾರಗಳ ಅಗತ್ಯ. ಪ್ರಮುಖ ಬೆಳೆಗಳಿಗೆ ಗ್ರಾಪಂ, ಉಳಿದವಕ್ಕೆ ಹೋಬಳಿ ಪರಿಗಣಿಸಲಾಗಿದೆ. ತಜ್ಞರ ಸಮಿತಿ ರಾಜ್ಯದ ಸರಾಸರಿ ಪರಿಗಣಿಸಿ ತಕ್ಷಣ ಇತ್ಯರ್ಥ ಹಾಗೂ ವಿಮೆ ನೋಂದಣಿ, ಪ್ರಕ್ರಿಯೆ ಕುರಿತು ವರದಿ ಸಲ್ಲಿಸಿದ್ದು, ಕೇಂದ್ರ ಸರ್ಕಾರವು ಮಾರ್ಗಸೂಚಿಯಲ್ಲಿ ಸೇರಿಸುವ ಭರವಸೆ ನೀಡಿದೆ.

ಕೇಂದ್ರ ಕಾಯ್ದೆ ವಾಪಸ್ ಪಡೆದ ಬಗ್ಗೆ ಏನಂತೀರಿ?

ಹನುಮನಗೌಡ: ಬೆಳೆಗಾರರು ಮತ್ತು ಗ್ರಾಹಕರ ಮಧ್ಯೆ ನೇರ ಸಂಪರ್ಕ ಅಗತ್ಯವಿದೆ. ಕೃಷಿ ಉತ್ಪನ್ನಗಳ ಬೆಲೆಯನ್ನು ಖರೀದಿದಾರರು ನಿರ್ಧರಿಸುವ ವ್ಯವಸ್ಥೆ ಬದಲಾಗಬೇಕು. ಮೂರು ಕಾಯ್ದೆಗಳ ಬಗ್ಗೆ ಆಯೋಗ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮೇಲ್ವಿಚಾರಣೆ ಪ್ರಾಧಿಕಾರ, ದತ್ತಾಂಶ, ಎಪಿಎಂಸಿ ಮಹತ್ವ ನಗಣ್ಯವಾಗುವ ಕಳವಳವಿದೆ.

ಮಳೆಯಿಂದ ಬೆಳೆಗಳ ನಷ್ಟಕ್ಕೆ ಪರಿಹಾರ ನೀಡಲು ವಿಧಿಸಿದ ಮಾನದಂಡಗಳೇ ಅಪ್ರಸ್ತುತ ಅಲ್ಲವೇ?

ಹನುಮನಗೌಡ: ಯಾವುದೇ ರೀತಿಯ ನಷ್ಟಕ್ಕೂ ಪರಿಹಾರದ ಬಗ್ಗೆ ಸಮೀಕ್ಷಾ ವರದಿ ಕೈಸೇರಿದ ಬಳಿಕ ಸರ್ಕಾರ ಕ್ರಮವಹಿಸುತ್ತದೆ. ಎನ್​ಡಿಆರ್​ಎಫ್ ನಿಯಮಗಳನ್ನು ಪರಿಷ್ಕರಿಸಿ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಶಿಫಾರಸು ಮಾಡುವ ಜತೆಗೆ ವಿಮೆಯಲ್ಲಿ ಬದಲಾವಣೆ ತರುವ ಬಗ್ಗೆ ಕೇಂದ್ರಕ್ಕೆ ಒತ್ತಡ ತರಲು ಕೋರಿದೆ.

ವಾಣಿಜ್ಯ ಜತೆಗೆ ಅನ್ಯ ಬೆಳೆಗಳ ಬೆಂಬಲ ಬೆಲೆಗಾಗಿ ರೈತರ ಹೋರಾಟವಿಲ್ಲವೇಕೆ?

ಬಡಗಲಪುರ ನಾಗೇಂದ್ರ: ಎಲ್ಲ ಕೃಷಿ ಉತ್ಪನ್ನಗಳಿಗೂ ಎಂಎಸ್​ಪಿ ಬೇಕು. ಹೋರಾಟದ ಬಗ್ಗೆ ತಪು್ಪ ಮಾಹಿತಿ ಇದು. ಯಾವುದೇ ರೈತರ ಬಗ್ಗೆ ಸಂಘಟನೆ ಯಿಂದ ತಾರತಮ್ಯವಿಲ್ಲ. ಸಮಗ್ರ ರೈತರ ಹಿತವೇ ಸಂಘದ ಧ್ಯೇಯ.

ಜನಪದ ಶೈಲಿಯಲ್ಲಿ ನೇಗಿಲಯೋಗಿ ಹಾಡು: ಗಂಭೀರ ವಿಷಯದ ಚರ್ಚೆ ಮಧ್ಯೆ ಸಂವಾದದಲ್ಲಿ ಪಾಲ್ಗೊಂಡವರನ್ನು ರಾಷ್ಟ್ರಕವಿ ಕುವೆಂಪು ವಿರಚಿತ ‘ನೇಗಿಲ ಯೋಗಿ’ ಹಾಡು ಗಮನಸೆಳೆಯಿತು. ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಅವರು ‘ನೇಗಿಲಯೋಗಿ’ ಹಾಡು ಪ್ರಸ್ತುತಪಡಿಸಿ, ಸಂವಾದದ ಲವಲವಿಕೆ ಹೆಚ್ಚಿಸಿದರು.

ಪ್ರಸ್ತಾವನೆ: ಪ್ರಸ್ತುತ ದೇಶದ 40 ಕಡೆಗಳಲ್ಲಿ ರೈತರ ಭೂಮಿ ಉಳುಮೆ, ಬೀಜ, ಬಿತ್ತನೆ, ಬಾಡಿಗೆ ಮತ್ತು ಕುಟುಂಬದ ಶ್ರಮ ಒಳಗೊಂಡು ಬೆಳೆ ಬೆಳೆಯಲು ಆಗುವ ವೆಚ್ಚ ಆಧರಿಸಿ ಎ2 ಪ್ಲಸ್ ಎಫ್​ಎಲ್ ಮಾದರಿಯಲ್ಲಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುತ್ತದೆ. ಆದರೆ, ಈಗ ರೈತರು ಸಿ2 ಎಫ್​ಎಲ್ ಪ್ಲಸ್ ಶೇ.50 ಆದಾಯ ಒಳಗೊಂಡ ಬೆಂಬಲ ಬೆಲೆ ಕೇಳುತ್ತಿದ್ದು, ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಳಗುರ್ಕಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಜವಾಬ್ದಾರಿ

  • ಕನಿಷ್ಠ ಬೆಂಬಲ ಬೆಲೆ ಬದಲಿಗೆ ವೈಜ್ಞಾನಿಕ ನೆಲೆಯಲ್ಲಿ ಶಾಸನಾತ್ಮಕ ಬೆಲೆ ಖಾತರಿ ಜಾರಿ
  • ಬೆಳೆವಿಮೆ ಮಾರ್ಗಸೂಚಿ, ಮಾನದಂಡ ಹಾಗೂ ನಿಯಮಾವಳಿ ಮಾರ್ಪಾಡು
  • ನೈಸರ್ಗಿಕ ವಿಕೋಪದಡಿ ಪರಿಹಾರ ವಿತರಣೆಗೆ ವಿಧಿಸಿದ ನಿಯಮಾವಳಿ ಪರಿಷ್ಕರಣೆ. ಕೃಷಿ ಮತ್ತು ವಾಣಿಜ್ಯ ಬೆಳೆಗಳಿಗೆ ಹೆಕ್ಟೇರ್​ಗೆ 50 ಸಾವಿರ ರೂ. ಬಹುವಾರ್ಷಿಕ ಬೆಳೆಗಳಿಗೆ ಹೆಕ್ಟೇರ್​ಗೆ 1 ಲಕ್ಷ ರೂ. ನಿಗದಿ ಸೂಕ್ತ
  • ಅಡಮಾನ ಸಾಲ ವ್ಯವಸ್ಥೆಯಲ್ಲಿ ಇನ್ನಷ್ಟು ನಮ್ಯತೆ ಅಳವಡಿಸಿಕೊಂಡು, ಆರ್​ಬಿಐ ಮಾರ್ಗಸೂಚಿ ಪಾಲಿಸುವಂತೆ ಬ್ಯಾಂಕ್​ಗಳಿಗೆ ಕಟ್ಟುನಿಟ್ಟಿನ ಸೂಚನೆ

ಮಾರ್ಗೋಪಾಯಗಳು

  • ಕಾಡಿನಲ್ಲಿ ಗೆಡ್ಡೆ-ಗೆಣಸು, ಹಣ್ಣಿನ ಬೀಜ ಚೆಲ್ಲುವುದರಿಂದ ಪ್ರಾಣಿಗಳಿಗೆ ಬೇಕಾದ ಆಹಾರ ದೊರೆತು, ಬೆಳೆಗಳ ಹಾನಿ ತಪ್ಪಿಸಬಹುದು
  • ತೊಗರಿ, ಸೋನಾ ಮಸೂರಿ, ರಾಜಮುಡಿ ಅಕ್ಕಿ, ಕೊಬ್ಬರಿ, ದ್ರಾಕ್ಷಿ, ನೀಲಿ ದ್ರಾಕ್ಷಿಗೆ ಜಾಗತಿಕ ಸೂಚ್ಯಂಕ (ಜಿ.ಐ)ದಿಂದ ಸೂಕ್ತ ಬೆಲೆ ಲಭ್ಯ
  • ಕೆಎಂಎಫ್ ಮಾದರಿಯಲ್ಲಿ ಹಣ್ಣು ಮತ್ತು ತರಕಾರಿಗೆ ತೋಟಗಾರಿಕಾ ಮಹಾಮಂಡಳಿ ರಚನೆ ಉತ್ತಮ. ಇದಕ್ಕಾಗಿ 192 ಟಿಎಪಿಸಿಎಂಎಸ್​ಗಳಲ್ಲಿ ಲಭ್ಯ ಜಾಗ ಮತ್ತು ಉಗ್ರಾಣಗಳು, 700 ಎಫ್​ಪಿಒ, 5,000 ಪ್ಯಾಕ್ಸ್ ಬಳಕೆಗೆ ಅವಕಾಶ

ಅರೆ ಉದ್ಯೋಗದಿಂದ ಹಳ್ಳಿಗಾಡಿನ ಜನ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ನಗರಕ್ಕೆ ವಲಸೆ ತಡೆಗೆ ಕೌಶಲ ಕರ್ನಾಟಕ ಯೋಜನೆ ಹಳ್ಳಿಗೆ ಕೊಂಡೊಯ್ಯಬೇಕು. ಒಕ್ಕಲುತನ ಮಾಡುವವನು, ಮಾಡಿಸುವವನ ಮಧ್ಯೆ ಅಂತರ ನೀಗಬೇಕು. ಪೂರ್ಣ ಉದ್ಯೋಗ, ಪೂರ್ಣ ವೇತನ, ಸುಖೀರಾಜ್ಯದತ್ತ, ಆತ್ಮನಿರ್ಭರ ಪರಿಕಲ್ಪನೆಯಂತೆ ಸ್ವಾವಲಂಬಿ ಕರ್ನಾಟಕ ಸಾಧ್ಯ.

| ಹನುಮನಗೌಡ ಬೆಳಗುರ್ಕಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ

ಕೃಷಿ ಅಭಿವೃದ್ಧಿ ವರದಿ ಜಾರಿ ಅನುಮಾನ

| ಬಡಗಲಪುರ ನಾಗೇಂದ್ರ ರಾಜ್ಯ ರೈತ ಸಂಘ ಅಧ್ಯಕ್ಷ

ದೇಶದಲ್ಲಿ ಸ್ವತಂತ್ರ ಬಂದ ನಂತರ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. 130 ಕೋಟಿ ಜನಸಂಖ್ಯೆಯಲ್ಲಿ 90 ಕೋಟಿ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೃಷಿ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 86 ಲಕ್ಷ ಹಿಡುವಳಿದಾರರಿದ್ದಾರೆ. ಆದರೆ 1991ರಿಂದ ಬಂದ ಹೊಸ ಆರ್ಥಿಕ ನೀತಿ ನಂತರ ಕೃಷಿ ಪರಿಸ್ಥಿತಿ ದಯನೀಯ ಸ್ಥಿತಿಗೆ ತಲುಪಿದ್ದು, ಕೃಷಿ ಕ್ಷೇತ್ರವನ್ನು ಮತ್ತೊಮ್ಮೆ ಅವಲೋಕನ ಮಾಡಬೇಕಿದೆ. ರಾಜ್ಯ ಕೃಷಿ ಬೆಲೆ ಆಯೋಗ ಸಲ್ಲಿಸಿರುವ ವರದಿಯಲ್ಲಿ ಕೆಲ ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬಹುದು. ಉಳಿದಂತೆ ಕೆಲ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರವೇ ನೇರವಾಗಿ ಜಾರಿಗೆ ತರಬಹುದು. ಒಂದೂವರೆ ದಶಕದಿಂದ ಆಡಳಿತ ನಡೆಸುತ್ತಿರುವ ಎಲ್ಲ ರಾಜಕೀಯ ಪಕ್ಷಗಳು ಕೃಷಿ ಸಂಬಂಧಿತ ಸುಧಾರಿತ ನೀತಿ ಜಾರಿಗೆ ತರುವಲ್ಲಿ ಫಲಪ್ರದವಾಗಿಲ್ಲ. ಕೃಷಿ ಬೆಲೆ ಆಯೋಗ ಸಲ್ಲಿಸಿರುವ ವರದಿಯನ್ನು ಸರ್ಕಾರ ಎಷ್ಟರ ಮಟ್ಟಿಗೆ ಪರಿಗಣಿಸಲಿದೆ ಮತ್ತು ಜಾರಿಗೆ ತರುವ ಸಾಧ್ಯತೆಗಳ ಬಗ್ಗೆ ಅನುಮಾನ ಕಂಡುಬರುತ್ತದೆ. ಒಂದು ಅಂಶವೂ ಜಾರಿಗೆ ಬರದ ರೀತಿಯಲ್ಲಿ ಕೇವಲ ವರದಿಯಾಗಿ ಉಳಿಯುವಂತೆ ಸರ್ಕಾರ ನಿರ್ಲಕ್ಷ್ಯ ತೋರಬಾರದು.

ಸಿ2ಪ್ಲಸ್ ಶೇ.50 ಆಧಾರದ ಬೆಂಬಲ ಬೆಲೆ ಕೊಡಿ: ಎಂ.ಎಸ್.ಸ್ವಾಮಿನಾಥನ್ ಸಮಿತಿಯು ಸಿ2 ಪ್ಲಸ್ ಎಫ್​ಎಲ್ ಶೇ.50 ಆದಾಯ ಮಾದರಿಯಲ್ಲಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಪ್ರಸ್ತುತ ರಾಜ್ಯದಲ್ಲಿ ಎಎಫ್2 ಮಾದರಿಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡುತ್ತಿರುವುದರಿಂದ ಎಲ್ಲ ರೈತರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಹೊಲದಲ್ಲಿ ರೈತ ಪಾದ ಗಟ್ಟಿಯಾಗಿ ನಿಲ್ಲುವಂತಹ ನೀತಿಗಳು ಬೇಕು. ಕೃಷಿ ಹೊರತಾದ ಪರ್ಯಾಯ ಯೋಚನೆ ಸಾಧ್ಯವಿಲ್ಲ, ಸಾಧುವೂ ಅಲ್ಲ. ಶೇ.63 ಉದ್ಯೋಗಾವಕಾಶಗಳು ಕೃಷಿಯಿಂದಲೇ ಸೃಜನೆಯಾಗುತ್ತವೆ. ಬಹು ಬೆಳೆಯಿಂದ ಸುಸ್ಥಿರ ಬದುಕು, ಸ್ವರಾಜ್ಯ ಪರಿಕಲ್ಪನೆ ಅನುಷ್ಠಾನಕ್ಕೆ ಬರಲಿದ್ದು, ಕೃಷಿ ಮತ್ತು ರೈತಮುಖಿ ನೀತಿ ಜತೆಗೆ ರೈತರ ರಚನಾತ್ಮಕ ಸ್ವಪ್ರಯತ್ನವಿರಬೇಕು.

| ಬಡಗಲಪುರ ನಾಗೇಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net