

ಹುಣಸೂರು: ನಾಲ್ಕು ದಶಕಗಳಿಂದ ಅನಧಿಕೃತ ಬಡಾವಣೆಗಳ ನಿವಾಸಿಗಳು ಎದುರಿಸುತ್ತಿರುವ ನಿವೇಶನ ಖಾತೆ ಸಮಸ್ಯೆಯನ್ನು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಪ್ರಸ್ತಾಪಿಸಿದರು.
ಶುಕ್ರವಾರ ಸದನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ಮೂಲಕ ಸಮಸ್ಯೆಯನ್ನು ಎಳೆಎಳೆಯಾಗಿ ಶಾಸಕ ಹರೀಶ್‌ಗೌಡ ಬಿಡಿಸಿಟ್ಟರು. 1977ರಿಂದಲೂ ಅನಧಿಕೃತ ಬಡಾವಣೆಗಳು ನಿರ್ಮಾಣಗೊಳ್ಳುತ್ತಲೇ ಇದ್ದವು. 2013ರ ಡಿಸೆಂಬರ್‌ನಲ್ಲಿ ಸರ್ಕಾರ ರಾಜ್ಯಪತ್ರವೊಂದನ್ನು ಹೊರಡಿಸಿ 2013ರ ಅಕ್ಟೋಬರ್‌ಗಿಂತ ಮುಂಚೆ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಖಾತೆ ನಮೂನೆ 3 ನೀಡಬಹುದು ಎಂದು ಆದೇಶಿಸಿತ್ತು. ನಂತರ 2017ರಲ್ಲಿ ರಾಜ್ಯ ಸರ್ಕಾರ ಮತ್ತೆ ಸುತ್ತೋಲೆ ಹೊರಡಿಸಿ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಖಾತೆ ಮಾಡಿಕೊಡಬಾರದು ಎಂದು ಆದೇಶಿಸಿ ಖಾತೆ ಮಾಡಿಕೊಟ್ಟಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸುವುದಾಗಿ ಸೂಚಿಸಿತ್ತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಲಂಚಾವತಾರ ಹೆಚ್ಚಲು ಕಾರಣವಾಯಿತು. 2023ರಲ್ಲಿ ಅಂದಿನ ಸರ್ಕಾರ ಸಮಸ್ಯೆ ಪರಿಹಾರಕ್ಕಾಗಿ ಉಪಸಮಿತಿಯೊಂದನ್ನು ರಚಿಸಿದೆ. ಇದು ಇಡೀ ರಾಜ್ಯದ ಸಮಸ್ಯೆಯಾಗಿದ್ದು, ಎಂಆರ್ 11 ಮತ್ತು ಕೆಎಂಇ 24ರಲ್ಲೂ ಬಡಾವಣೆಗಳ ಕುರಿತು ನಮೂದಾಗಿದ್ದು ಸರ್ಕಾರ ಕನಿಷ್ಠ ಹಳೆಯ ಖಾತೆಗಳಿಗಾದರೂ ಜೀವ ತುಂಬಬೇಕು ಎಂದು ಆಗ್ರಹಿಸಿದರು.
ಮೂಲಸೌಕರ್ಯಗಳ ಕೊರತೆ: ಅನಧಿಕೃತ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಒದಗಿಸುವ ಕುರಿತು ಕೇಳಿರುವ ಪ್ರಶ್ನೆಗೆ ನಗರಾಡಳಿತ ಸಚಿವರು ನಿವಾಸಿಗಳಿಂದ ದುಪ್ಪಟ್ಟು ಕಂದಾಯ ವಸೂಲು ಮಾಡಿ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದಿದ್ದಾರೆ. ಆದರೆ, ಖಾತೆ ಮಾಡಿಕೊಡದೆ ದುಪ್ಟಟ್ಟು ಕಂದಾಯ ನೀಡುವುದಿಲ್ಲವೆಂದು ನಾಗರಿಕರು ಹೇಳುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೂ ಆದಾಯದಲ್ಲಿ ಖೋತಾ ಹಾಗೂ ನಾಗರಿಕರು ಸೌಲಭ್ಯ ವಂಚಿತರಾಗಿದ್ದಾರೆ. ಕೊನೆಪಕ್ಷ ಅನಧಿಕೃತ ಬಡಾವಣೆ ಎಂತಲೇ ಖಾತೆ ನೀಡುವ ಅಥವಾ ಖಾತಾ ಎ, ಖಾತಾ ಬಿ ಎಂತಲಾದರೂ ನೀಡುವ ವ್ಯವಸ್ಥೆ ಆಗಬೇಕಿದೆ ಎಂದರು.
ಅನುಮೋದನೆಗೆ ಒತ್ತಾಯ: ಹುಣಸೂರು ನಗರಸಭೆಗೆ ನಗರೋತ್ಥಾನ ಯೋಜನೆಯಡಿ 25 ಕೋಟಿ ರೂ.ಅನುದಾನ ಮಂಜೂರಾಗಿದ್ದು,ನಗರದ ಹೃದಯಭಾಗದ ಬಡಾವಣೆಯಲ್ಲಿ ಮಳೆನೀರು ಹಾನಿಯುಂಟು ಮಾಡುತ್ತಿದೆ. ಇದನ್ನು ತಪ್ಪಿಸಲು ನಗರೋತ್ಥಾನ ಯೋಜನೆಯಡಿ 8 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಸರ್ಕಾರ ಕಾಮಗಾರಿ ತಡೆಹಿಡಿದಿದೆ. ಕೂಡಲೇ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
ನಗರಾಡಳಿತ ಸಚಿವ ರಹಮತ್ ಖಾನ್ ಮಾತನಾಡಿ, ಅನಧಿಕೃತ ಬಡಾವಣೆಗಳಲ್ಲಿ ಖಾತೆ ನೀಡುವ ಕುರಿತು ಸಂಪುಟ ಉಪಸಮಿತಿಯೊಂದನ್ನು ರಚಿಸಿ ಪರಿಹಾರಕ್ಕೆ ಕ್ರಮವಹಿಸಬೇಕಿದೆ. ಖಾತೆ ನೀಡುವ ಕುರಿತಂತೆ ಲೋಕಾಯುಕ್ತದಲ್ಲಿ ಪ್ರಕರಣದ ದಾಖಲಾಗಿ ಎಲ್ಲೂ ಖಾತೆ ಮಾಡಿಕೊಡಬಾರದೆಂದು ಆದೇಶಿಸಿದೆ. ಪ್ರಕರಣ ಹೈಕೋರ್ಟ್‌ನಲ್ಲಿದ್ದು, ಹಾಗಾಗಿ ಏನೂ ಮಾಡಲಾಗದ ಪರಿಸ್ಥಿತಿ ಎದುರಾಗಿದೆ ಎಂದರು.