

ಬೆಳಗಾವಿ: ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಲೋಪಗಳು ಆಗದಂತೆ ಎಲ್ಲ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
ನಗರದ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಳಿಗಾಲ ಅಧಿವೇಶನ-2024 ಸಿದ್ಧತೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕು. ಡಿ.9 ರಿಂದ ಹತ್ತು ದಿನಗಳ ಕಾಲ ರಾಜ್ಯದ ಇಡೀ ಆಡಳಿತ ಯಂತ್ರ ಬೆಳಗಾವಿಯಲ್ಲಿರಲಿದ್ದು, ಯಾವುದೇ ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಚಳಿಗಾಲ ಅಧಿವೇಶನ ಕುರಿತಂತೆ ಈಗಾಗಲೇ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಅಧಿವೇಶನ ಜರುಗುವ 10 ದಿನಗಳ ಕಾಲ ಸುವರ್ಣಸೌಧದ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.
ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ಥೆ ಒದಗಿಸಬೇಕು. ಈ ವಿಷಯದಲ್ಲಿ ಯಾವುದೇ ನ್ಯೂನತೆ ಆಗದಂತೆ ನಿಗಾವಹಿಸುವಂತೆ ಸೂಚಿಸಿದರು.
ಛಾಯಾಚಿತ್ರ ಪ್ರದರ್ಶನ: ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುತ್ತಿದೆ. ಅಧಿವೇಶನ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳು, ಸಾರ್ವಜನಿಕರು ಗಾಂಧಿ ಭಾರತ ಛಾಯಾಚಿತ್ರ ಪ್ರದರ್ಶನದ ವೀಕ್ಷಣೆಗೆ ಅನುಕೂಲವಾಗುವಂತೆ ರೂಪುರೇಷೆಗಳನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ವಿಶೇಷ ಭೂಸ್ವಾಧಿನ ಆಯುಕ್ತ ಹರ್ಷ ಶೆಟ್ಟಿ ಇತರರಿದ್ದರು.