

ಕಾರ್ಗಲ್: ನಾವು ಮಾಡುವ ಯಾವುದೇ ಕಾರ್ಯದಲ್ಲಿ ಅಚಲವಾದ ವಿಶ್ವಾಸ ಇರಿಸಿಕೊಂಡಾಗ ಮಾತ್ರ ಲ ಸಿಗಲು ಸಾಧ್ಯವೆಂದು ಗೋಕರ್ಣ ಮಹಾಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರಾ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಚೌಡೇಶ್ವರಿ ಮಹಾಲಸಾ ದೇವಸ್ಥಾನದ 27ನೇ ವರ್ಧಂತಿ ಉತ್ಸವ ಹಾಗೂ ರಥೋತ್ಸವದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಶರಾವತಿ ಕಣಿವೆಯಲ್ಲಿ ಅಂದು ನಿರ್ಮಾಣವಾದ ಚೌಡೇಶ್ವರಿ ಅಮ್ಮನ ಸಣ್ಣ ಗುಡಿ ಇಂದು ಭಕ್ತರ ಕಷ್ಟಗಳನ್ನು ಪರಿಹರಿಸುವ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಹುತ್ತದ ರೂಪದಲ್ಲಿ ಬೆಳೆದು ನಿಂತ ಒಂದು ಶಕ್ತಿ ಸದಾ ಜಾಗೃತವಾಗಿದ್ದು ಧರ್ಮದರ್ಶಿ ಮಂಡಲವು ಈ ದೈವ ಶಕ್ತಿಯ ಮೇಲೆ ಅಚಲವಾದ ವಿಶ್ವಾಸ ಇಟ್ಟು ಪೂಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದು ಹೇಳಿದರು. ದೇವಾಲಯದಲ್ಲಿ ಪ್ರತಿ ಅಮಾವಾಸ್ಯೆಯಂದು ನಡೆಯುವ ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವದಲ್ಲಿ ವಿಶ್ವಾಸದಿಂದ ಅತ್ಯಂತ ಶ್ರದ್ಧೆಯಿಂದ ಬೇಡುವ ಭಕ್ತರ ಹೆಗಲಿಗೆ ತಾನಾಗಿಯೇ ಪಲ್ಲಕ್ಕಿಯು ಕರೆದೊಯ್ಯುತ್ತದೆ. ಇದಕ್ಕೆ ದೈವಿ ಶಕ್ತಿಯೂ ಕಾರಣ ಎಂದು ಅಭಿಪ್ರಾಯಪಟ್ಟರು. ಮೋಹನ್ ಎಂ.ಪೈ, ಶಿವಾನಂದ ಪ್ರಭು, ವಿನೋದ್ ಎಸ್. ಮಹಾಲೆ, ಪ್ರಹ್ಲಾದ್ ಎಂ. ಪೈ, ಶ್ರೀರಾಮ ಪ್ರಭು, ಅಜಿತ್ ಮಹಾಲೆ, ಸತೀಶ್ ಮಹಾಲೆ ಉಪಸ್ಥಿತರಿದ್ದರು.